ಮೈಸೂರು:ಆರೋಗ್ಯಭರಿತ ಜೀವನವನ್ನು ಸಾಗಿಸಲು ಆಯು ರ್ವೇದ ಮತ್ತು ಯೋಗದ ಅಗತ್ಯವಿದೆ ಎಂದು ಆಯುರ್ವೇದ ಮತ್ತು ಯೋಗ ಶಿಕ್ಷಣ ಸಂಸ್ಥೆಯ ಹಿರಿಯ ಸಲಹೆಗಾರ್ತಿ ಡಾ.ಎಂ.ಎನ್.ಸುಧಾ ತಿಳಿಸಿದರು.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಆಧುನಿಕ ಆರೋಗ್ಯ ಸಮಸ್ಯೆಗಳು ಆಯುರ್ವೇದ ಮತ್ತು ಯೋಗ ನಿರ್ವಹಣೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುರ್ವೇದ ಆಯಸ್ಸನ್ನು ತಿಳಿಸುವ ಶಾಸ್ತ್ರವಾಗಿದ್ದು, ಯಾವ ಋತುಮಾನಕ್ಕೆ ಯಾವ ರೀತಿಯ ಆಹಾರವನ್ನು ತಿನ್ನಬೇಕು ಎಂಬುದನ್ನು ತಿಳಿಸುತ್ತದೆ ಎಂದರು.
ಇಂದು ತಂತ್ರಜ್ಞಾನ ಬೆಳೆಯುತ್ತಿದ್ದರೂ ಫಲವಿಲ್ಲದೆ ಮತ್ತೆ ಮೂಲಕ್ಕೆ ಬರಲಾಗುತ್ತಿದೆ. ದೇಹದಲ್ಲಿ ಗಮನಿಸಲಾಗದಂತಹ ನೋವುಗಳು ಪ್ರತಿನಿತ್ಯ ಕಂಡುಬರುತ್ತಿವೆ. ದೇಹದ ನೋವೇ ಇಲ್ಲದೆ ಜೀವನ ನೆಡೆಸುವವರು ಬೆರಳಣಿಕೆಯಾಗಿದ್ದಾರೆ ಎಂದು ಹೇಳಿದರು.
ಹೊಸ ಹೊಸ ರೋಗಗಳೇ ಈ ಯುಗದ ವಿಶೇಷವಾಗಿದ್ದು, ಬೆಂಗಳೂರು ಕಾಯಿಲೆಗಳ ತವರೂರಾಗುತ್ತಿದೆ. ಯುವಕರಲ್ಲಿ ನಿಶ್ಯಕ್ತಿ ಹೆಚ್ಚಾಗುತ್ತಿದ್ದು, ಥೈರಾಯಿಡ್, ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಮೆದುಳು ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಜಾಸ್ತಿಯಾಗುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೇ ಮತ್ತಷ್ಟು ಪರಿಣಾಮಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಲವಾರು ಸಮಸ್ಯೆಗಳು ಎದು ರಾಗುತ್ತಿವೆ. ವಿಡಿಯೋ ಗೇಮ್‍ಗಳಿಂದ ಬರವಣಿಗೆಯನ್ನು ಮರೆಯುತ್ತಿದ್ದಾರೆ. ಮಕ್ಕಳ ಲ್ಲಿರುವ ಏಕಾಗ್ರತೆ ಹಾಗೂ ಇತರೆ ಸಮಸ್ಯೆಗಳನ್ನು ಅರಿಯಲು ವೈದ್ಯರು ಮತ್ತು ಪೋಷಕ ರಿಂದಲೇ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ನಾವೆಲ್ಲರೂ ಗೊಂದಲದಲ್ಲಿರುವುದು. ತಂತ್ರಜ್ಞಾನವನ್ನು ಸರಿಯಾಗಿ ಬಳಸದೆ ಅಥವಾ ಬಳಸಿದರೇ ಮತ್ತೇನಾದರೂ ತೊಂದರೆ ಉಂಟಾಗಬಹುದೇ ಎಂಬ ಗೊಂದಲದಿಂದಲೇ ಇದ್ದೇವೆ ಎಂದರು.
ವಿದೇಶಿ ಸಂಸ್ಕøತಿಗೆ ಮರುಳಾಗಿ ದೇಶದ ಸಂಸ್ಕøತಿ ಹಾಗೂ ಆಹಾರ ಪದ್ಧತಿಯನ್ನು ಕಡೆಗಣಿಸಿರುವುದರಿಂದಲೇ ದಿನಕ್ಕೊಂದು ಕಾಯಿಲೆ ಬರುತ್ತಿವೆ. ಬೇರೆ ದೇಶದವರು ಈ ನೆಲದ ಸಂಸ್ಕøತಿಯನ್ನು ಕಲಿಯಲು ಬರುತ್ತಿದ್ದರೇ ನಾವು ನಮ್ಮ ಸಂಸ್ಕøತಿಯನ್ನೇ ಮರೆಯುತ್ತಿದ್ದೇವೆ ಎಂದು ಹೇಳಿದರು. ಆಯುರ್ವೇದ ಮತ್ತು ಯೋಗ ಈ ನೆಲದ ಮೂಲ ಸಂಸ್ಕøತಿಯಾಗಿದ್ದು, ಪ್ರತಿಯೊಬ್ಬರು ಯೋಗವನ್ನು ಮಾಡಬೇಕು. ಯೋಗ ಮತ್ತು ಧ್ಯಾನ ಜೀವನವನ್ನು ಉತ್ತಮವಾಗಿಯೂ ಹಾಗೂ ಸಂತೋಷದಾಯಕವಾಗಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಡಾ.ಆರ್. ಸುರೇಶ್, ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್‍ಕುಮಾರ್ ಉಪಸ್ಥಿತರಿದ್ದರು.