ದೇವೇಗೌಡರಿಗೆ ನಾನು, ಹನುಮೇಗೌಡರು ರಾಜಕೀಯ ಪುನರ್‍ಜನ್ಮ ನೀಡಿದ್ದೆವು
ಹಾಸನ

ದೇವೇಗೌಡರಿಗೆ ನಾನು, ಹನುಮೇಗೌಡರು ರಾಜಕೀಯ ಪುನರ್‍ಜನ್ಮ ನೀಡಿದ್ದೆವು

March 12, 2019

ಮೊಮ್ಮಗನಿಗೆ ಅಭ್ಯರ್ಥಿ ಪಟ್ಟ ಕೈಬಿಟ್ಟು ನಮ್ಮಂತವರಿಗೆ ಆಶೀರ್ವದಿಸಲಿ: ಮಾಜಿ ಸಚಿವ ಎ.ಮಂಜು

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಿಗೆ ರಾಜಕೀಯದಲ್ಲಿ ಪುನರ್ ಜನ್ಮ ಕೊಟ್ಟವರು ನಾನು ಮತ್ತು ಹನುಮೇಗೌಡರು ಎಂಬುದನ್ನು ಮರೆತು ಈಗ ತಮ್ಮ ಮೊಮ್ಮಗನಿಗೆ ಲೋಕಸಭೆ ಚುನಾವಣೆ ಅಭ್ಯರ್ಥಿ ಪಟ್ಟ ಕಟ್ಟುತ್ತಿದ್ದು, ಕೂಡಲೇ ಕೈಬಿಟ್ಟು ನಮ್ಮಂತವರಿಗೆ ಆಶೀರ್ವದಿಸಲಿ ಎಂದು ಮಾಜಿ ಸಚಿವ ಎ.ಮಂಜು ಹಳೆಯ ನೆನಪನ್ನು ನೆನಪಿಸಿದರು.

ನಗರದ ದೇವಿಗೆರೆ ಬಳಿ ಇರುವ ನೀರು ಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1991ರಲ್ಲಿ ಪಾರ್ಲಿಮೆಂಟಿಗೆ ದೇವೇಗೌಡರು ಅಭ್ಯರ್ಥಿಯಾಗಿ ನಿಂತಾಗ ನಮ್ಮ ಬಳಿ ಬಂದು ಸಹಕಾರ ಕೇಳಿದರು. ಅಂದು ಮೂರು ಸಾವಿರ ಮತಗಳಿಂದ ಗೆಲುವು ಪಡೆದರು. ಕೆ.ಎಚ್. ಹನುಮೇ ಗೌಡರು ಮತ್ತು ನಾನು ಇಬ್ಬರೂ ಸೇರಿ ಅವರಿಗೆ ರಾಜಕೀಯ ಪುನರ್‍ಜೀವನ ಕಲ್ಪಿಸಿದ ಬಗ್ಗೆ ಅವರು ಮರೆಯಬಾರದು.

ಮೊಮ್ಮಗನನ್ನು ಅಭ್ಯರ್ಥಿಯಾಗಿ ನಿಲ್ಲಿಸುವುದನ್ನು ಕೈಬಿಟ್ಟು ಈಗಲಾದರೂ ಬೇರೆಯವರಿಗೆ ಅವಕಾಶ ಕೊಡಲಿ ಎಂಬುದು ನಮ್ಮ ಒತ್ತಾಯ. ನಮ್ಮಂತವರಿಗೆ ಆಶೀರ್ವದಿಸಲು ದೇವರು ಈಗ ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ಸಲಹೆ ನೀಡಿದರು. ನಾನು ಹಾಸನ ಜಿಲ್ಲೆಯಲ್ಲಿ ಸ್ಪರ್ಧೆ ಮಾಡಲು ದೇವೇಗೌಡರೇ ಅವಕಾಶ ಕೊಡಲಿ ಎಂಬುದು ಮೊದಲ ಬೇಡಿಕೆಯಾಗಿದೆ ಎಂದು ಪತ್ರಕರ್ತರ ಮುಂದೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. ಮಾಜಿ ಪ್ರಧಾನಿ ದೇವೇಗೌಡರು ಲೋಕಸಭೆ ಚುನಾ ವಣೆಗೆ ನಿಂತರೇ ನಮ್ಮ ಯಾವ ವಿರೋಧವಿಲ್ಲ. ಆದರೇ ಕುಟುಂಬ ರಾಜಕಾರಣ ಮಾಡಿದರೇ ನಮ್ಮ ವಿರೋಧವಿದೆ ಎಂದರು.

ನಾನು ಬಿಜೆಪಿ ಹೈಕಮಾಂಡ್ ಭೇಟಿಯಾಗಿ ಯಾವ ಚರ್ಚೆ ಮಾಡಿರುವುದಿಲ್ಲ. ಆದರೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೂರು ಬಾರಿ ಮಾತನಾಡಿದ್ದೇನೆ. ಪಕ್ಷದ ಕಾರ್ಯಕರ್ತರ ತೀರ್ಮಾನ ಪಡೆದ ಬಳಿಕ ಇನ್ನೆರಡು ದಿನದಲ್ಲಿ ಸ್ಪಷ್ಟ ನಿರ್ಧಾರ ಹೇಳುತ್ತೇನೆ. ಈಗಲೂ ಕೂಡ ಕಾಂಗ್ರೆಸ್ ಪಕ್ಷದ ಜೊತೆ ಯಾವ ಮುನಿಸು ಇಲ್ಲ. ಗೌರವದಿಂದಲೇ ಎಲ್ಲರ ಜೊತೆ ನಡೆದುಕೊಳ್ಳುತ್ತಿದ್ದೇನೆ. ಯಾವ ಕಾರಣಕ್ಕೂ ದೇವೇಗೌಡರ ಮೊಮ್ಮಗನನ್ನು ನಿಲ್ಲಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಮಂಡ್ಯ ದಲ್ಲಿ ಸುಮಲತಾ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲು ಹೇಳಿದ್ದೆ. ಆದರೆ ಜೆಡಿಎಸ್ ಪಕ್ಷದವರು ತಮ್ಮ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಹೊರತು ಕಾಂಗ್ರೆಸ್ ಪಕ್ಷದ ಬಗ್ಗೆ ಯಾವ ಕಾಳಜಿ ಇರುವುದಿಲ್ಲ ಎಂದು ಕುಟುಕಿದರು. ಜೆಡಿಎಸ್ ಪಕ್ಷದವರು ತಮ್ಮ ಸ್ವಂತ ನಿರ್ಧಾರದಲ್ಲಿ ಕುಟುಂಬ ರಾಜಕಾರಣ ಮಾಡಿದರೇ ಜನರು ಇದಕ್ಕೆ ಒಪ್ಪುವುದಿಲ್ಲ ಎಂದರು.

ಯೋಗಾ ರಮೇಶ್ ಅಪಸ್ವರ

ಮಾಜಿ ಸಚಿವ ಅವರು ಬಿಜೆಪಿ ಸೇರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಅಪಸ್ವರ ಎತ್ತಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲೇ ಸೂಕ್ತ ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ. ಪಕ್ಷಕ್ಕೆ ಎ.ಮಂಜು ಅವಶ್ಯಕತೆ ಇಲ್ಲ ಎಂದಿದ್ದಾರೆ. ಕಾಂಗ್ರೆಸ್‍ನಲ್ಲಿ ಎ.ಮಂಜು ಹಳಸಿದ ಅನ್ನ ಆಗಿದ್ದಾರೆ. ಹಳಸಿದ ಅನ್ನವನ್ನು ಯಾರೂ ತಿನ್ನುವುದಿಲ್ಲ. ಹಾಗೆ ಅವರನ್ನು ಕಾಂಗ್ರೆಸ್‍ನಲ್ಲಿ ಮೂಲೆ ಗುಂಪು ಮಾಡಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅದೋಗತಿ ಗಿಳಿಯಲು ಎ.ಮಂಜು ಅವರೇ ಕಾರಣ. ಅಂತಹವರು ಬಿಜೆಪಿ ಅಭ್ಯರ್ಥಿಯಾಗುವುದು ಸರಿಯಲ್ಲ ಎಂದಿದ್ದಾರೆ.

Translate »