ನಂಜನಗೂಡು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗೃಹಿಣಿಯ ಮೃತ ದೇಹ ಇಂದು ಕಪಿಲಾ ನದಿಯಲ್ಲಿ ಪತ್ತೆಯಾಗಿದೆ.
ಮುಳ್ಳೂರು ಗ್ರಾಮದ ಮಹೇಶ್ ಎಂಬುವರ ಪತ್ನಿ ಪ್ರಿಯಾಂಕ (26) ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದವಳಾಗಿದ್ದು, ಈಕೆ ಹೊಂದಿದ್ದ ಅನೈತಿಕ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮುಳ್ಳೂರು ಗ್ರಾಮದ ಮಹೇಶ್ ಎಂಬಾತನನ್ನು ಈಕೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈಕೆ ತನ್ನ ಪಕ್ಕದ ಮನೆಯ ಯುವಕನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದ್ದು, ಈ ವಿಷಯ ಪತಿಗೆ ತಿಳಿದು ಮನೆಯಲ್ಲಿ ಗಲಾಟೆಯಾಗಿತ್ತಂತೆ.
ಕಳೆದ ಮೂರು ದಿನಗಳ ಹಿಂದೆ ಈಕೆ ನಾಪತ್ತೆಯಾಗಿದ್ದು, ಇಂದು ಹೆಜ್ಜಿಗೆ ಸೇತುವೆ ಬಳಿ ಆಕೆಯ ಮೃತ ದೇಹ ಪತ್ತೆಯಾಗಿದೆ. ತನ್ನ ಪತ್ನಿ ಪ್ರಭು ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ನಾನು ಅದನ್ನು ಪ್ರಶ್ನೆ ಮಾಡಿದ ಕಾರಣ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಆಕೆಯ ಸಾವಿಗೆ ಅನೈತಿಕ ಸಂಬಂಧವಿಟ್ಟು ಕೊಂಡಿದ್ದ ಪ್ರಭು ಮತ್ತು ಆತನ ತಾಯಿ ಜಯಮ್ಮ ಕಾರಣ ಎಂದು ಮೃತಳ ಪತಿ ಮಹೇಶ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಭು ಮತ್ತು ಜಯಮ್ಮ ವಿರುದ್ಧ ಆರೋಪ ದಂಡ ಸಂಹಿತೆ 306ರಡಿ ಪ್ರಕರಣ ದಾಖಲಿಸಿಕೊಂಡಿರುವ ಸಬ್ ಇನ್ಸ್‍ಪೆಕ್ಟರ್ ಪುನೀತ್ ತನಿಖೆ ಮುಂದುವರೆಸಿದ್ದಾರೆ.