ಆ.11ರಂದು ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಚಾಲನೆ
ಮೈಸೂರು

ಆ.11ರಂದು ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಚಾಲನೆ

July 23, 2018

ಭೇರ್ಯ:  ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಆ.11ರಂದು ಚಾಲನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮ ದಲ್ಲಿ ಶನಿವಾರ ಬಸ್ ಶೆಲ್ಟರ್, ಗ್ರಾ.ಪಂ ವಾಣಿಜ್ಯ ಸಂಕೀರ್ಣ, ಅಂಗನವಾಡಿ ಕೇಂದ್ರ ಮತ್ತು ಅಶೋಕ ಸ್ಥಂಭ ಉದ್ಘಾಟಿಸಿ ಮಾತ ನಾಡಿದರು. ಮೂರು ದಿನಗಳ ಕಾಲ ನಡೆಯಲಿ ರುವ ಜಲಪಾತೋತ್ಸವವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಉದ್ಘಾಟಿಸಲಿದ್ದು, ನಾಡಿನ ನಾನಾ ಹೆಸರಾಂತ ಕಲಾವಿದರಿಂದ ರಸ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಈ ಬಾರಿ ಹಿಂದೆಂದಿಗಿಂತಲೂ ಅದ್ಧೂರಿ ಯಾಗಿ ಜಲಪಾತೋತ್ಸವ ಜರುಗಲಿದೆ ಎಂದು ಹೇಳಿದರು.

ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಶೀಘ್ರವೇ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರ ಉಪಸ್ಥಿತಿಯಲ್ಲಿ ಸಭೆಯ ದಿನಾಂಕ ನಿಗದಿಗೊಳಿಸಲಾಗುವುದು ಎಂದು ಹೇಳಿದರು.

ಆ.3ಕ್ಕೆ ಗ್ರಾಮ ವಾಸ್ತವ್ಯ: ಆಗಸ್ಟ್ 3ರಂದು ರಾತ್ರಿ ಮಿರ್ಲೆ ಗ್ರಾ.ಪಂ ವ್ಯಾಪ್ತಿಯ ಮಾಳ ನಾಯಕನಹಳ್ಳಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ಯವ್ಯ ಮಾಡಲಾಗುವುದು. ಆ.4ರಂದು ಬೆಳಗ್ಗೆ ಮಿರ್ಲೆ ಗ್ರಾಮದಲ್ಲಿ ನಡೆಯುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸ ಲಾಗುವುದು ಎಂದು ಹೇಳಿದರು.

ಕ್ಷೇತ್ರದ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲೂ ಪ್ರತಿ ತಿಂಗಳ ಮೊದಲ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಲಾಗುವುದು. ಅಲ್ಲದೆ ಪ್ರತಿ ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ಅಹವಾಲು ಸ್ವೀಕರಿಸಲಾಗುವುದು ಎಂದ ಅವರು, ಮಿರ್ಲೆ ಗ್ರಾಮದ ಬಸ್ ನಿಲ್ದಾಣದ ಉಳಿಕೆ ಕಾಮಗಾರಿ ಹಾಗೂ ಆಸ್ಪತ್ರೆ ಮೇಲ್ದರ್ಜೆಗೆ ಕ್ರಮ ವಹಿಸಲಾಗುವುದು. ಗ್ರಾಮ ವಾಸ್ತವ್ಯದ ಅಂಗವಾಗಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಕೆ.ಆರ್.ನಗರದಲ್ಲಿ 20 ಎಕರೆಯಲ್ಲಿ ಮುಖ್ಯ ಮಂತ್ರಿಗಳ ಹೆಸರಲ್ಲಿ ಬಡಾವಣೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಸದ್ಯದಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಈ ವೇಳೆ ಹೇಳಿದರು.

ನಾನು ಎಂದೂ ಬದಲಾಗಲ್ಲ: “ನಾನು ಮೊದಲ ಬಾರಿ ಶಾಸಕನಾದಾಗ ಜನರಿಗೆ ಹೇಗೆ ಸ್ಪಂದಿಸುತ್ತಿದ್ದೆನೋ ಹಾಗೆಯೇ ಈಗಲೂ ಮತದಾರರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ. ಈಗ ಮಂತ್ರಿಯಾದೆನೆಂದು ಅಹಂಕಾರ ತೋರುವವನಲ್ಲ. ಸಾ.ರಾ.ಮಹೇಶ್ ಬದಲಾಗಿದ್ದಾನೆ. ಜನರ ಕೈಗೆ ಸಿಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದು, ಇದು ಸರಿಯಲ್ಲ. ನಾನು ಎಂದೂ ಧಿಮಾಕು ತೋರಲ್ಲ. ಈಗ ಜವಾಬ್ದಾರಿ ಹೆಚ್ಚಿದ್ದು, ಮಂತ್ರಿಯಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಬೇಕಾಗಿದೆ” ಎಂದು ಹೇಳಿದರು.

ಶಾಸಕನಾಗುವುದಕ್ಕೂ ಮೊದಲು ಹಾಗೂ ಬಳಿಕ ಸತತ 14 ವರ್ಷಗಳ ಕಾಲ ವೈಯಕ್ತಿಕ ಹಣದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಈ ಹಿಂದೆ ಕ್ಷೇತ್ರವನ್ನು ಸರ್ವತೋಮುಖ ಅಭಿ ವೃದ್ಧಿಯೆಡೆಗೆ ಕೊಂಡೊಯ್ಯಲು ಹಗಲಿರುಳು ಶ್ರಮಿಸಿದ್ದರೂ ಈ ಬಾರಿಯ ಚುನಾವಣೆ ಯಲ್ಲಿ ನನಗೆ ನಿರೀಕ್ಷಿತ ಮುನ್ನಡೆಯ ಗೆಲುವು ದೊರೆಯಲಿಲ್ಲ ಎಂಬ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಿರ್ಲೆಗೆ ಆಗಮಿಸಿದ ಸಚಿವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ಹೂಮಳೆಗೈದ ಗ್ರಾಮದ ಜನರು ಜೈಕಾರ ಕೂಗಿದರು. ಗ್ರಾಮದ ದಲಿತ ಮುಖಂಡ ಸತೀಶ್ ಅವರ ನೇತೃತ್ವದಲ್ಲಿ ಯುವಕರು ಸಾ.ರಾ. ಮಹೇಶ್ ಅವರ ತೂಕದ (58 ಕೆ.ಜಿ.)ಗುಲಾಬಿ ಹಾರವನ್ನು ಸಮರ್ಪಿಸಿ ಅಭಿಮಾನ ಮೆರೆದರು.

ಗ್ರಾ.ಪಂ ಅಧ್ಯಕ್ಷ ಮಾಳನಾಯಕನಹಳ್ಳಿ ಮಹದೇವ್, ಉಪಾಧ್ಯಕ್ಷೆ ರತ್ನಮ್ಮ, ತಾ.ಪಂ ಸದಸ್ಯೆ ಶೋಭಾ ಕೋಟೇಗೌಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪ್ರಧಾನ ಕಾರ್ಯದರ್ಶಿ ಧನಂಜಯ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ನಿರ್ದೇಶಕರಾದ ಗೋವಿಂದೇಗೌಡ, ಕುಪ್ಪಳ್ಳಿ ಸೋಮು, ನಿವೃತ್ತ ಉಪನ್ಯಾಸಕ ಕಾಟ್ನಳು ಲಕ್ಕೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್.ಹನುಮೇಗೌಡ, ತಾ.ಪಂ ಇಒ ಲಕ್ಷ್ಮೀ ಮೋಹನ್, ತಹಸೀಲ್ದಾರ್ ಮಹೇಶ್ ಚಂದ್ರ, ಪ್ರೊಬೆಷನರಿ ಎಸಿ ಲಿಖಿತಾ, ನೀರಾವರಿ ಇಲಾಖೆಯ ಎಇಇ ಮಿರ್ಲೆ ಚಂದ್ರಶೇಖರ್, ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಲೋಕನಾಥ್, ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಸುಮಿತ್ರಾ, ಲೋಕೋಪಯೋಗಿ ಎಇಇ ಪ್ರಸಾದ್, ಪಿಡಿಒ ಚಂದ್ರಶೇಖರ್, ಗ್ರಾ.ಪಂ ಸದಸ್ಯರಾದ ಶೋಭಾಮುರುಳಿ, ಎಂ.ಎಲ್.ವಿಶ್ವನಾಥ್, ಸುದರ್ಶನ್, ಸವಿತಾ ಯೋಗೇಶ್, ಪುಷ್ಪಾ, ರೇಖಾ, ಮಂಜುಳಾ, ರಾಜು, ಶರಾವತಿ, ಜಯಲಕ್ಷ್ಮೀ, ಸರಸ್ವತಿ, ಲೋಕೇಶ್, ಪ್ರಗತಿಪರ ರೈತ ವೆಂಕಟೇಶ್, ಮುಖಂಡರಾದ ವಾಸು, ಮುರುಳಿ, ಮೋಹನ್, ಲೋಕಿ, ಸಂತೋಷ್ ಸೇರಿದಂತೆ ನಾನಾ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

Translate »