ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಕೊಡಗು

ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಸೋಮವಾರಪೇಟೆ: ರೈತರ ಸಾಲ ಮನ್ನಾ ಮಾಡದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಧೋರಣೆಯನ್ನು ಖಂಡಿಸಿ ರಾಜ್ಯವ್ಯಾಪಿ ಬಂದ್‍ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಜ್ಯ ಸರ್ಕಾರಿ ಬಸ್, ಖಾಸಗಿ ವಾಹನಗಳು, ಆಟೋರಿಕ್ಷಾ ಗಳು ಎಂದಿನಂತೆ ಸಂಚರಿಸಿದವು. ಪಟ್ಟಣ ವ್ಯಾಪ್ತಿಯ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ತಾಲೂಕು ಕಚೇರಿಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ತೆರೆದಿದ್ದವು. ಎಲ್ಲಾ ಶಾಲಾ ಕಾಲೇಜು ಗಳು ಬಂದ್ ಕುರಿತು ನಿಖರ ಮಾಹಿತಿ ದೊರೆಯದ ಗ್ರಾಮೀಣ ಪ್ರದೇಶದ ರೈತರು ಸೋಮವಾರ ಸಂತೆ ದಿನವಾಗಿದ್ದರಿಂದ ಮಾರ್ಕೆಟ್ ಹಾಗೂ ಆರ್‍ಎಂಸಿ ಆವರಣದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿದರು. ಪಟ್ಟಣ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಪಟ್ಟಣ ಹೊರತು ಪಡಿಸಿದಂತೆ ಬಹುತೇಕ ಗ್ರಾಮೀಣ ಭಾಗದಲ್ಲಿ ಬಂದ್ ಯಶಸ್ವಿಯಾಗಲಿಲ್ಲ. ಮಧ್ಯಾಹ್ನ 1 ಗಂಟೆಯ ನಂತರ ಸಂತೆ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಮುಂದುವರೆಯಿತು.

ಬೆಳಗ್ಗೆ 8 ಗಂಟೆ ವೇಳೆಗೆ ವಿವೇಕಾನಂದ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಂದ ಐದು ನಿಮಿಷಗಳ ಕಾಲ ಅನುಮತಿ ಪಡೆದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವು ದಾಗಿ ತಿಳಿಸಿದ ಬಿಜೆಪಿ ಕಾರ್ಯಕರ್ತರು, ರಸ್ತೆಯಲ್ಲಿ ಧರಣ ಕುಳಿತರು. ಅದೇ ವೇಳೆಗೆ ಪಟ್ಟಣದಿಂದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ ಎರಡು ವಾಹನಗಳು ವಿದ್ಯಾರ್ಥಿಗಳನ್ನು ಹತ್ತಿಸಿ ಕೊಂಡು ವಿವೇಕಾನಂದ ವೃತ್ತದ ಬಳಿ ಆಗಮಿಸಿದವು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಎರಡೂ ಬಸ್‍ಗಳನ್ನು ತಡೆದು, ವಾಪಸು ತೆರಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸದ ಶಾಲಾ ವಾಹನ ಗಳ ಚಾಲಕರು ಹೋಗಲೇಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭ ಚಾಲಕ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಬಿಜೆಪಿ ಕಾರ್ಯಕರ್ತರು ಶಾಸಕ ಅಪ್ಪಚ್ಚುರಂಜನ್ ರವರ ನೇತೃತ್ವದಲ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಪಾದಯಾತ್ರೆ ನಡೆಸಿದರು.

ಇದರಿಂದ ಕೆಲ ಕಾಲ ಹಳೆ ಪೊಲೀಸ್ ಠಾಣೆಯ ಮುಂಭಾಗ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಸಿಪಿಐ ನಂಜುಂಡೇ ಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳ ಮನವಿಗೆ ಸ್ಪಂದಿಸದ ಉಭಯ ಬಣಗಳ ಕಾರ್ಯಕರ್ತರು ಪ್ರತಿಭಟನೆ ಮುಂದುವರೆ ಸಿದರು. ನಂತರ ಮಧ್ಯಾಹ್ನ 1 ಗಂಟೆ ವೇಳೆಗೆ ಶಾಸಕರ ನೇತೃತ್ವ ದಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡದೇ ವಚನಭ್ರಷ್ಟರಾದ ಕುಮಾರಸ್ವಾಮಿಯವರ ಸರ್ಕಾರ ವನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಪ್ರಮುಖರಾದ ಎಸ್.ಬಿ. ಭರತ್‍ಕುಮಾರ್, ವಿ.ಎಂ.ವಿಜಯ, ಎಸ್.ಆರ್.ಸೋಮೇಶ್, ಕಿಬ್ಬೆಟ್ಟ ಮಧು ಮತ್ತಿತರರು ಇದ್ದರು.

Translate »