ವಿರಾಜಪೇಟೆಯಲ್ಲಿ ಬಂದ್‍ಗೆ ಉತ್ತಮ ಬೆಂಬಲ
ಕೊಡಗು

ವಿರಾಜಪೇಟೆಯಲ್ಲಿ ಬಂದ್‍ಗೆ ಉತ್ತಮ ಬೆಂಬಲ

May 29, 2018

ವಿರಾಜಪೇಟೆ:  ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಚುನಾವಣಾ ಸಂದರ್ಭ ಸಾಲ ಮನ್ನಾ ಮಾಡುವುದಾಗಿ ಹೇಳಿ ಈಗ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ ಎಂದು ಆಪಾದಿಸಿ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ವಿರಾಜಪೇಟೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿರಾಜಪೇಟೆ ಪಟ್ಟಣದಲ್ಲಿ ವರ್ತಕರು ಬೆಳಿಗ್ಗೆಯಿಂದಲೇ ಅಂಗಡಿ-ಹೋಟೆಲ್‍ಗಳ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ಯಾಂಕ್‍ಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಬಾಗಿಲು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತಿದ್ದುದು ಕಂಡುಬಂತು, ಖಾಸಗಿ ಬಸ್ ಸಂಚಾರ ರದ್ದುಗೊಂಡ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಜನಸಂಖ್ಯೆ ವಿರಳವಾಗಿತ್ತು, ರಾಜ್ಯ ರಸ್ತೆ ಸಾರಿಗೆಯ ಕೆಲವೊಂದು ಬಸ್‍ಗಳು ಸಂಚರಿಸುತ್ತಿದ್ದವು. ಶಾಲಾ ಕಾಲೇಜುಗಳು ಮುಚ್ಚಿದ್ದವು, ನ್ಯಾಯಾಲಯದ ಕಲಾಪಗಳು ನಡೆಯಿತು.

ಗಡಿಯಾರ ಕಂಬದ ಬಳಿ ಬಿ.ಜೆ.ಪಿ. ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಬಿಜೆಪಿ ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಉಪಾಧ್ಯಕ್ಷ ರಘು ನಾಣಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಫೆಡರೇಷನ್ ಅಧ್ಯಕ್ಷ ಮಾಚೇಟ್ಟಿರ ಚೋಟು ಕಾವೇರಪ್ಪ, ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಕಾರ್ಯದರ್ಶಿ ಯೋಗೇಶ್ ನಾಯ್ಡು, ಎಂ.ಎಂ. ಪರಮೇಶ್ವರ, ಕಂಬೆಯಂಡ ಗಣೇಶ್, ಬಿ.ಜಿ.ಸಾಯಿನಾಥ್ ಹಾಗೂ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಡಿ.ವೈ.ಎಸ್.ಪಿ.ನಾಗಪ್ಪ ಅವರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

Translate »