ತಾಲೂಕಿನ ವಿವಿಧೆಡೆ ಉತ್ತಮ ಮಳೆ
ಚಾಮರಾಜನಗರ

ತಾಲೂಕಿನ ವಿವಿಧೆಡೆ ಉತ್ತಮ ಮಳೆ

May 29, 2018

ಚಾಮರಾಜನಗರ:  ಚಾಮರಾಜನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಉತ್ತಮ ಮಳೆ ಯಾಯಿತು. ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೆ ಸುರಿದ ಧಾರಾಕಾರ ಮಳೆ ಯಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಮಳೆಯಿಂದ ರೈತರು ಹಾಗೂ ವನ್ಯಜೀವಿ ಪ್ರಿಯರಲ್ಲಿ ಸಂತಸ ಮೂಡಿಸಿದರೆ, ಇನ್ನೊಂದೆಡೆ ವಾಹನ ಸವಾರರು ಹಾಗೂ ನಗರದ ಜನರಿಗೆ ಕಿರಿಕಿರಿ ಉಂಟಾಯಿತು.

ನಗರದ ಬಹುತೇಕ ಎಲ್ಲ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆ ಯುತ್ತಿದೆ. ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಮಳೆ ನೀರು ರಸ್ತೆ ತುಂಬೆಲ್ಲ ತುಂಬಿ ರಸ್ತೆಗಳು ಸಂಪೂರ್ಣ ಜಲಾವೃತ ಗೊಂಡು ಕೆರೆಯಂತೆ ಗೋಚರವಾದವು. ಕೆಲವೆಡೆ ರಸ್ತೆಗಳು ಕೆಸರುಮಯವಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಪರದಾಡಿದರು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿ ಇರುವ ಕಾರಣ ಏಕಮುಖ ಸಂಚಾರವಿದ್ದು, ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ವಾಹನ ದಟ್ಟಣೆ ಉಂಟಾಯಿತು. ಕೆರೆ-ಕಟ್ಟೆ ಒಡೆದು ನೀರು ಹರಿಯುವಂತಹ ವಾತಾವರಣ ಜೋಡಿ ರಸ್ತೆಯಲ್ಲಿ ನಿರ್ಮಾಣವಾಯಿತು. ಇದರಿಂದ ವಾಹನ ಸವಾರರು ಸಂಚರಿ ಸಲು ಹರಸಾಹಸ ಪಡುವಂತಾಯಿತು.

ಜಿಲ್ಲೆಯು ಶೇ 52ರಷ್ಟು ಅರಣ್ಯ ಪ್ರದೇಶ ಒಳಗೊಂಡಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅರಣ್ಯ ಪ್ರದೇಶ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ.

Translate »