ಶಾಸಕ ಎನ್.ಮಹೇಶ್‍ಗೆ ಸಚಿವ ಸ್ಥಾನ ನೀಡಲು ಒತ್ತಾಯ
ಚಾಮರಾಜನಗರ

ಶಾಸಕ ಎನ್.ಮಹೇಶ್‍ಗೆ ಸಚಿವ ಸ್ಥಾನ ನೀಡಲು ಒತ್ತಾಯ

May 29, 2018

ಚಾಮರಾಜನಗರ: ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ಹಾಗೂ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪ್ರಗತಿಪರ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಹೇಶ್ ಅವರು ಒಬ್ಬ ಚಳವಳಿಗಾರರಾಗಿದ್ದು, ರೈತಪರ ಹೋರಾಟಗಳಲ್ಲಿ ಭಾಗವಹಿಸಿ ಬೆಂಬಲ ಸೂಚಿಸುತ್ತಿದ್ದರು. ಅನುಭವಿ ರಾಜಕಾರಣ ಯಾಗಿರುವ ಅವರು ರೈತರ ಸಮಸ್ಯೆ, ಗಡಿಸಮಸ್ಯೆ, ನೀರಿನ ಸಮಸ್ಯೆ, ದಲಿತರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಈ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸುವ ಶಕ್ತಿ ಅವರಲ್ಲಿ ಇರುವುದರಿಂದ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್ ಅವರು ಚಳವಳಿ ಗಾರರಾಗಿದ್ದು, ಎಲ್ಲ ರೀತಿಯ ಹೋರಾಟಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿದೆ. ಹಾಗಾಗಿ, ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಹೋರಾಟ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಆಲೂರುಮಲ್ಲು, ಜೆಡಿಎಸ್ ರಾಜ್ಯ ಕಾರ್ಯಕಾರಿಣ ಸದಸ್ಯ ಸಿ.ಎಂ.ಕೃಷ್ಣಮೂರ್ತಿ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಹಾಜರಿದ್ದರು.

Translate »