ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ
ಕೊಡಗು

ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ

May 29, 2018

ಕುಶಾಲನಗರ:  ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿಯಲ್ಲಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಮುಂಗಟ್ಟುಗಳು ತೆರೆದಿದ್ದವು. ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಆಟೋರೀಕ್ಷಾ ಮತ್ತು ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳ ಸಂಚಾರ ಎಂದಿನಂತೆ ನಡೆಯಿತು. ಆದರೆ ಖಾಸಗಿ ಬಸ್‍ಗಳ ಸಂಚಾರ ಕ್ಷೀಣ ಸಿತ್ತು. ಚಿತ್ರಮಂದಿರ, ಹೋಟೆಲ್‍ಗಳು, ಔಷಧಿ ಅಂಗಡಿ, ಹಾಲಿನ ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದವು. ಜನಸಂಚಾರ ಕೂಡ ಎಂದಿನಂತೆ ಇತ್ತು. ಶಾಲಾ ಕಾಲೇಜುಗಳ ಆರಂಭದ ಮೊದಲ ದಿನವಾದ ಇಂದು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ ಮಕ್ಕಳ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಸೇರಿದಂತೆ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಿದವು. ತಾಲೂಕಿನ ಗಡಿ ಗ್ರಾಮಗಳಾದ ಶಿರಂಗಾಲ, ತೊರೆನೂರು, ಮಣಜೂರು ಹಾಗೂ ಹೆಬ್ಬಾಲೆ, ಕೂಡಿಗೆ ಮತ್ತಿತರ ಗ್ರಾಮಗಳಲ್ಲಿ ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿಗಳು ಎಂದಿನಂತೆ ವ್ಯಾಪಾರ ನಡೆಸಿದವು. ಜನಸಂಚಾರ ಕೂಡ ಎಂದಿನಂತೆ ಇತ್ತು.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಗುಡ್ಡೆಹೊಸೂರು ಗ್ರಾಮದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಕುಮಾರಸ್ವಾಮಿ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಬಂದ್ ಗೆ ಕರೆ ನೀಡಿತ್ತು. ಬಂದ್ ಹಿನ್ನೆಲೆಯಲ್ಲಿ ಗುಡ್ಡೆ ಹೊಸೂರು ಸರ್ಕಲ್ ಬಳಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ನೇತೃತ್ವದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಸಿಎಂ ಕುಮಾರ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರ ಕೂಗಿದರು. ಈ ಸಂದರ್ಭ ಬಿ.ಬಿ. ಭಾರತೀಶ್ ಮಾತನಾಡಿದರು. ಗುಡ್ಡೆಹೊಸೂರು ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಆರ್.ಉತ್ತಪ್ಪ, ಲವನಂಜಪ್ಪ, ಬಿ.ವಿ.ಮೋಹನ್ ಕುಮಾರ್, ಸಲಿ, ನಿತ್ಯ, ಕೆ.ಡಿ.ಗಿರೀಶ್, ಮೋಹನ್ ಕೆ.ಕೆ, ಬಸಪ್ಪ, ಪ್ರವೀಣ್, ರಮೇಶ್ ಕಣ್ಣಾ ಇತರರಿದ್ದರು.

Translate »