ರೈತರ ಎಲ್ಲಾ ಸಾಲ ಮನ್ನಾಕ್ಕೆ ಕಬ್ಬು ಬೆಳೆಗಾರರ ಪ್ರತಿನಿಧಿ ಆಗ್ರಹ
ಮೈಸೂರು

ರೈತರ ಎಲ್ಲಾ ಸಾಲ ಮನ್ನಾಕ್ಕೆ ಕಬ್ಬು ಬೆಳೆಗಾರರ ಪ್ರತಿನಿಧಿ ಆಗ್ರಹ

June 5, 2018

ಮೈಸೂರು: ರಾಜ್ಯ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿದೆ ರೈತರು ಮಾಡಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಿ, ರೈತರ ಏಳಿಗೆಗೆ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಳೆ ಮಿರ್ಲೆ ಸುನಯ್ ಗೌಡ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಹಲವಾರು ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಪಡೆದ ಸಾಲವನ್ನು ಮಾತ್ರ ಮನ್ನಾ ಮಾಡುವುದಾಗಿ ಹೇಳುತ್ತಿದೆ. ಇದರಿಂದ ರೈತರಿಗೆ ಬಹುಪಾಲು ರೈತರಿಗೆ ಅನ್ಯಾಯವಾದಂತಾಗುತ್ತದೆ. ಇದನ್ನು ಮನಗಂಡು ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕು. ಕಬ್ಬು ಬೆಳೆಯ ಬಾಕಿ ಹಣ ನೀಡಿ, ಜೂನ್ ಅಂತ್ಯದೊಳಗೆ 2018-19ರ ಕಬ್ಬಿನ ದರವನ್ನು ನಿಗದಿಗೊಳಿಸಿ ಕಾರ್ಖಾನೆಗಳನ್ನು ಸಕಾಲದಲ್ಲಿ ಆರಂಭಿಸಿ, ಹೊಸ ಸಕ್ಕರೆ ಕಾರ್ಖಾನೆಗಳ ಬದಲಿಗೆ ಮುಚ್ಚಿದ ಹಳೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಬೇಕು. ಕಬ್ಬು ಬೆಲೆ ನಿಯಂತ್ರಣ ಮಂಡಳಿಗೆ ಕಬ್ಬು ಬೆಳೆಗಾರರನ್ನೇ ನೇಮಿಸಬೇಕೆಂದು ಆಗ್ರಹಿಸಿದರು.

ಎಲ್ಲೆಡೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಭತ್ತ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ದಲ್ಲಾಳಿಗಳೇ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಸರ್ಕಾರದ

ವತಿಯಿಂದ ಆರಂಭಿಸುವ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆ ಕಟಾವು ಮಾಡುವ ವೇಳೆಗೆ ಖರೀದಿ ಕೇಂದ್ರವನ್ನು ತೆರೆಯುವುದಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪಂಪ್ ಸೆಟ್‍ಗಳಿಗೆ 8 ಗಂಟೆಗಳ ವಿದ್ಯುತ್ ಸರಬರಾಜು ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಹೆಚ್ಚಾಗುತ್ತಿದೆ. ವೈಜ್ಞಾನಿಕ ಬೆಲೆ ಸಿಗದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ರಾಜ್ಯ ಮಟ್ಟದ ಹೋರಾಟ ರೂಪಿಸುವ ನಿಟ್ಟಿನಲ್ಲಿ ಜೂ.6ರಂದು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ ಸಭೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ರೈತ ಮುಖಂಡರು, ಕಬ್ಬು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಎಂ.ಎಸ್.ರಾಜೇಂದ್ರ, ಜಿ.ಮಾರ ಹಳ್ಳಿ ಮಂಜು, ಹದಿನಾರು ಶಿವಕುಮಾರ್, ನಂಜುಂಡಸ್ವಾಮಿ ಮತ್ತಿತರರು ಇದ್ದರು.

Translate »