ಮೈಸೂರು: ಖತರ್ನಾಕ್ ಕಳ್ಳನೊಬ್ಬ ಬೇರೊಬ್ಬರ ಟ್ಯಾಬ್‍ನಿಂದ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ತಾನು ಬಾಡಿಗೆ ಕರೆದೊಯ್ದಿದ್ದ ಕಾರನ್ನೇ ಎಗರಿಸಿ ಪರಾರಿಯಾದ ಸಿನಿಮೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯೊಬ್ಬರ ಟ್ಯಾಬ್‍ನಲ್ಲಿ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ಸ್ಥಳಕ್ಕೆ ಬಂದ ಮಾರುತಿ ರಿಟ್ಜ್ ಕಾರಿನಲ್ಲಿ ಮೊದಲು ಇನ್ಫೋ ಸಿಸ್ ಬಳಿಗೆ ತೆರಳಿ, ನಂತರ ಚಾಲಕನ ಮನವೊಲಿಸಿ ಮೈಸೂರು ತಾಲೂಕು ಮೇಗಳಾಪುರದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಚಾಲಕನಿಗೆ ಚಳ್ಳೆಹಣ್ಣು ತಿನ್ನಿಸಿ, ಕಾರನ್ನೇ ಕದ್ದೊಯ್ದಿದ್ದಾನೆ. ಮೇ 23ರ ರಾತ್ರಿ ಈ ಘಟನೆ ನಡೆದಿದ್ದು, ಕಳ್ಳನ ಮೋಸದ ಜಾಲಕ್ಕೆ ಸಿಲುಕಿ, ಕಾರು ಕಳೆದುಕೊಂಡಿರುವ ಹೂಟಗಳ್ಳಿ ನಿವಾಸಿ ರಘುಸ್ವಾಮಿ ಇಲವಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಖತರ್ನಾಕ್ ಐಡಿಯಾ: ಮೇ 23ರಂದು ರಾತ್ರಿ 7 ಗಂಟೆ ವೇಳೆಗೆ ಬೆಂಗಳೂರಿನಿಂದ ರೈಲಿನಲ್ಲಿ ಬಂದ ಇಂಜಿನಿಯ ರಿಂಗ್ ವಿದ್ಯಾರ್ಥಿಯೋರ್ವ, ಮೈಸೂರಿನ ರೈಲು ನಿಲ್ದಾಣ ಸರ್ಕಲ್‍ನ ಆಡ್ಯಾರ್ ಆನಂದ ಭವನ ಹೋಟೆಲ್ ಬಳಿ ನಿಂತು, ತನ್ನ ಸ್ನೇಹಿತನ ಬರುವಿಕೆಗೆ ಕಾಯುತ್ತಿದ್ದ. ಆ ವೇಳೆ ವಿದ್ಯಾರ್ಥಿ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ‘ನಾನು ಅರ್ಜೆಂಟಾಗಿ ಇನ್‍ಫೋಸಿಸ್‍ಗೆ ಹೋಗಬೇಕು, ನಾನು ಮಳೆಯಲ್ಲಿ ನೆನೆದಿದ್ದೇನೆ. ನನ್ನ ಮೊಬೈಲ್ ವರ್ಕ್ ಆಗುತ್ತಿಲ್ಲ. ಅರ್ಜೆಂಟಾಗಿ ಕ್ಯಾಬ್ ಬುಕ್ ಮಾಡಬೇಕು. ದಯವಿಟ್ಟು ನಿಮ್ಮ ಮೊಬೈಲ್‍ನಲ್ಲಿ ಜುಗ್ನೂ ಕ್ಯಾಬ್ ಬುಕ್ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾನೆ.
ಆಗ ಆ ವಿದ್ಯಾರ್ಥಿ `ನನ್ನ ಮೊಬೈಲ್‍ನಲ್ಲಿ ಇಂಟರ್ ನೆಟ್ ಇಲ್ಲ’ ಎಂದರೂ ಬಿಡದ ಅಪರಿಚಿತ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಇದರಿಂದ ಮನ ಕರಗಿ ಆ ವಿದ್ಯಾರ್ಥಿ, ತನ್ನ ಬಳಿ ಇದ್ದ ಟ್ಯಾಬ್‍ನಲ್ಲಿ ಜುಗ್ನೂ ಆಪ್ ಡೌನ್‍ಲೋಡ್ ಮಾಡಿಕೊಂಡು ಇನ್‍ಫೋಸಿಸ್‍ಗೆ ಕಾರು ಬುಕ್ ಮಾಡಿದ್ದಾನೆ. ಐದೇ ನಿಮಿಷದಲ್ಲಿ ಮಾರುತಿ ರಿಟ್ಜ್ ಕಾರು(ಕೆಎ 09-ಸಿ 6083) ರೈಲ್ವೇ ಸ್ಟೇಷನ್ ಸರ್ಕಲ್‍ಗೆ ಬಂದಿದೆ. ಅಪರಿಚಿತ ಕೂಡಲೇ ವಿದ್ಯಾರ್ಥಿಗೆ ಥ್ಯಾಂಕ್ಸ್ ಹೇಳಿ ಕಾರನ್ನೇರಿ ಹೊರಟಿದ್ದಾನೆ. ಕಾರು ಚಾಲಕ ಕಂ ಮಾಲೀಕ ರಘುಸ್ವಾಮಿ, ಬುಕ್ಕಿಂಗ್ ವಿಳಾಸವಾದ ಇನ್‍ಫೋಸಿಸ್ ಮೇನ್ ಗೇಟ್ ಬಳಿ ಕರೆದೊಯ್ದು `ಇದೇ ಇನ್ಫೋಸಿಸ್ ಇಳಿಯಿರಿ’ ಎಂದು ಹೇಳಿದ್ದಾರೆ. ಆದರೆ ಕಾರಿನಿಂದ ಇಳಿ ಯದ ಆಸಾಮಿ, `ಮುಂದೆ ಸ್ವಲ್ಪ ದೂರದಲ್ಲಿ ನಮ್ಮ ಸಂಬಂಧಿ ಕನೋರ್ವ ಕಾಯುತ್ತಿದ್ದಾನೆ, ಅಲ್ಲಿಗೆ ಡ್ರಾಪ್ ಮಾಡಿ. ಬಾಡಿಗೆ ಅದೆಷ್ಟಾಗುತ್ತೋ ಕೊಡುತ್ತೇನೆ’ ಎಂದಿದ್ದಾನೆ.
ಇದಕ್ಕೆ ಒಪ್ಪಿದ ರಘುಸ್ವಾಮಿ, ಹಿಂದೆ ಕುಳಿತಿದ್ದ ಆಸಾಮಿ ಹೇಳಿದಂತೆ ಕಾರು ಚಾಲಿಸಿಕೊಂಡು ಹೋಗಿದ್ದಾರೆ. ಕೆಆರ್‍ಎಸ್ ರಸ್ತೆ ಮೂಲಕ ಮೇಗಳಾಪುರ ಬಳಿ ನಿರ್ಜನ ಪ್ರದೇಶದ ರಸ್ತೆಯಲ್ಲಿ ಸಾಗುವಾಗ ರಸ್ತೆ ರಿಪೇರಿಗಾಗಿ ಎಂ ಸ್ಯಾಂಡ್ ಮತ್ತು ಕಲ್ಲುಗಳು ಸಂಚಾರಕ್ಕೆ ಅಡ್ಡಿಯಾಗಿವೆ. ಹಾಗಾಗಿ ಚಾಲಕ ರಘುಸ್ವಾಮಿ ಕಾರಿನಿಂದಿಳಿದು ರಸ್ತೆಗೆ ಅಡ್ಡಲಾ ಗಿದ್ದ ಒಂದೆರಡು ಕಲ್ಲುಗಳನ್ನು ಪಕ್ಕಕ್ಕೆ ಹಾಕುತ್ತಿದ್ದಾಗ ಇತ್ತ ಆ ಅಪರಿಚಿತ ವ್ಯಕ್ತಿ ತಾನೇ ಕಾರು ಚಾಲನೆ ಮಾಡಿ ಕೊಂಡು ಪರಾರಿಯಾಗಿದ್ದಾನೆ. ಕಗ್ಗತ್ತಲಾಗಿದ್ದರಿಂದ ದಿಕ್ಕು ತೋಚದಂತಾದ ರಘುಸ್ವಾಮಿ ಸಮೀಪದ ಮೇಗಳಾಪುರಕ್ಕೆ ನಡೆದುಕೊಂಡು ಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಗ್ರಾಮಸ್ಥರೊಂದಿಗೆ ಇಲವಾಲ ಪೊಲೀಸ್ ಠಾಣೆಗೆ ತೆರಳಿ ಅಂದು ರಾತ್ರಿಯೇ ದೂರು ನೀಡಿದ್ದಾರೆ.
ಪೊಲೀಸರು ತಕ್ಷಣ ಕಾರಿನ ನಂಬರ್ ಸಮೇತ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿ ದ್ದಾರೆ. ಅಲ್ಲದೆ ರಘುಸ್ವಾಮಿ ಅವರ ಮೊಬೈಲ್‍ನಲ್ಲಿ ದಾಖ ಲಾಗಿದ್ದ ಕ್ಯಾಬ್ ಬುಕ್ಕಿಂಗ್ ಓಟಿಪಿ ಆಧಾರದಲ್ಲಿ ಪರಿಶೀಲಿಸಿ ದಾಗ ಕಾರು ಬುಕ್ ಮಾಡಿದ್ದು ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಆ ವಿದ್ಯಾರ್ಥಿ ಯನ್ನು ವಿಚಾರಿಸಿದಾಗ `ನಾನು ಕಷ್ಟದಲ್ಲಿದ್ದೇನೆ. ತುರ್ತಾಗಿ ವಾಹನ ಬುಕ್ ಮಾಡಬೇಕೆಂದು ಬೇಡಿಕೊಂಡಿದ್ದರಿಂದ ಸಹಾಯ ಮಾಡಿದ್ದೇನೆ ಅಷ್ಟೇ. ಆತ ಯಾರು ಎಂಬುದು ನನಗೆ ಗೊತ್ತಿಲ್ಲ’ ಎಂದು ತಿಳಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರಿ ನೊಂದಿಗೆ ಪರಾರಿಯಾಗಿರುವ ಐನಾತಿ ಕಳ್ಳನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಹೇಗೆಲ್ಲಾ ಮೋಸ ಮಾಡ್ತಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಕಷ್ಟದಲ್ಲಿದ್ದಾನೆಂದು ಮರುಗಿ ಸಹಾಯ ಮಾಡಿದ ವಿದ್ಯಾರ್ಥಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗೆಯೇ ಜೀವನ ನಡೆಸಲೆಂದು ಹುಣ ಸೂರಿನ ವಿ.ಪಿ. ಬೋರೆ ಗ್ರಾಮದಿಂದ ಬಂದು ಹೂಟ ಗಳ್ಳಿಯಲ್ಲಿ ವಾಸವಿದ್ದುಕೊಂಡು ಜುಗ್ನೂ ಕಂಪನಿ ಮೂಲಕ ಬಾಡಿಗೆಗೆ ಓಡಿಸುತ್ತಿದ್ದ ರಘುಸ್ವಾಮಿ ತನ್ನ ಕಾರನ್ನೇ ಕಳೆದುಕೊಂಡಿದ್ದಾರೆ.