ಬಸ್ಸಿಗೆ ಕಾಯುತ್ತಿದ್ದ ಮಹಿಳೆ  ಬ್ಯಾಗ್‍ನಿಂದ ಚಿನ್ನಾಭರಣ ಕಳವು
ಮೈಸೂರು

ಬಸ್ಸಿಗೆ ಕಾಯುತ್ತಿದ್ದ ಮಹಿಳೆ  ಬ್ಯಾಗ್‍ನಿಂದ ಚಿನ್ನಾಭರಣ ಕಳವು

July 7, 2018

ಮೈಸೂರು:  ಮಂಡ್ಯದಿಂದ ಬಂದು ಮನೆಗೆ ಹೋಗಲು ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಬೆಲೆ ಬಾಳುವ 66 ಗ್ರಾಂ ಚಿನ್ನದ ಆಭರಣಗಳನ್ನು ಖದೀಮರು ಎಗರಿಸಿರುವ ಘಟನೆ ಹಾಡಹಗಲೇ ಮೈಸೂರಿನ ಸಬರ್ಬನ್ ಬಸ್ ಸ್ಟ್ಯಾಂಡ್ ಎದುರು ಬಿಎನ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ಜಯಂತ್ ಎಂಬುವರ ಪತ್ನಿ ಶ್ರೀಮತಿ ಹೆಚ್.ಎಲ್.ರಕ್ಷಿತಾ ಆಭರಣ ಕಳೆದುಕೊಂಡವರು. ಸಂಬಂಧಿಕರ ಮದುವೆಗೆಂದು ಬುಧವಾರ ಸಂಜೆ ಮಂಡ್ಯಕ್ಕೆ ಮಗುವಿನೊಂದಿಗೆ ಹೋಗಿದ್ದ ರಕ್ಷಿತಾ, ತಾಯಿಯೊಂದಿಗೆ ಮಂಡ್ಯದಿಂದ ಒಂದೇ ಬಸ್ಸಿನಲ್ಲಿ ಬಂದಿದ್ದಾರೆ. ಕೆ.ಆರ್.ಪೇಟೆಗೆ ಹೋಗಲು ತಾಯಿ ಶ್ರೀರಂಗಪಟ್ಟಣದಲ್ಲಿ ಇಳಿದುಕೊಂಡರೆ, ರಕ್ಷಿತಾ ಮೈಸೂರಿಗೆ ಬಂದು ಸಬರ್ಬನ್ ಬಸ್ ನಿಲ್ದಾಣದಲ್ಲಿಳಿದಿದ್ದಾರೆ. ಅಲ್ಲಿ ಮಗು ತಿಂಡಿ ಕೇಳಿದ ಕಾರಣ ವ್ಯಾನಿಟಿ ಬ್ಯಾಗ್‍ನಿಂದ ಹಣ ತೆಗೆದುಕೊಳ್ಳಲು ಜಿಪ್ ತೆಗೆದಾಗ ಒಡವೆ ಬಾಕ್ಸ್ ಇತ್ತು. ನಂತರ ಸಿಟಿ ಬಸ್ಸಿಗಾಗಿ ಬಿಎನ್ ರಸ್ತೆಯ ಬಸ್ ತಂಗುದಾಣದಲ್ಲಿ ಸುಮಾರು 40 ನಿಮಿಷ ಮಗು ಎತ್ತಿಕೊಂಡು ನಿಂತಿದ್ದರು.

ಸುಮಾರು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬ್ಯಾಗ್ ನೋಡಿಕೊಂಡಾಗ ಜಿಪ್ ತೆರೆದಿತ್ತಲ್ಲದೆ, ಅದರಲ್ಲಿ ಆಭರಣದ ಬಾಕ್ಸ್ ನಾಪತ್ತೆಯಾಗಿತ್ತು ಎಂದು ರಕ್ಷಿತಾ ಹೇಳಿದ್ದಾರೆ. ಆ ಬಾಕ್ಸ್‍ನಲ್ಲಿ 1 ಲಾಂಗ್ ಸರ, 1 ನೆಕ್ಲೆಸ್, 2 ಉಂಗುರ ಹಾಗೂ ಮಗುವಿನ 6 ಸಣ್ಣ ಗುಂಡು ಸೇರಿ ಒಟ್ಟು 66 ಗ್ರಾಂನ ಆಭರಣಗಳಿದ್ದವು ಎಂದು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಪತಿ ಜಯಂತ್ ದಾವಿಸಿ, ತಕ್ಷಣ ಲಷ್ಕರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಅಲ್ಲಿನ ಸಿಸಿ ಕ್ಯಾಮರಾಗಳನ್ನೆಲ್ಲಾ ಪರೀಕ್ಷಿಸುತ್ತಿದ್ದಾರೆ.

Translate »