ಲಯನ್ಸ್ ಸಂಸ್ಥೆ ಸಾರ್ಥಕ ಬದುಕನ್ನು ರೂಪಿಸುತ್ತಿದೆ
ಮೈಸೂರು

ಲಯನ್ಸ್ ಸಂಸ್ಥೆ ಸಾರ್ಥಕ ಬದುಕನ್ನು ರೂಪಿಸುತ್ತಿದೆ

July 7, 2018

ಮೈಸೂರು:  ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಈ ಮೂರು ಅಂಶಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಲಯನ್ಸ್ ಎಂದು ಜಿಲ್ಲಾ 1ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ನಗರದ ನೇಗಿಲಯೋಗಿ ಮರಳೇಶ್ವರ ಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಜಿಲ್ಲೆ 317 ಎ ಇದರ ಲಯನ್ಸ್ ಕ್ಲಬ್ ಆಫ್ ಮೈಸೂರು ಕಾವೇರಿ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ಕಾಮಧೇನು 2018-19ರ ನೂತನ ಕಾವೇರಿ ಅಧ್ಯಕ್ಷ ಲಯನ್ ಎಸ್.ಶಿವಣ್ಣ, ಕಾರ್ಯದರ್ಶಿ ಲಯನ್ ಕೆ.ಎಸ್.ಶಿವಲಿಂಗಪ್ಪ, ಖಜಾಂಚಿ ಲಯನ್ ಡಾ.ಶಂಕರಯ್ಯ ಹಾಗೂ ಕಾಮಧೇನು ಅಧ್ಯಕ್ಷ ಲಯನ್ ಆಕಾಶ್ ಎನ್.ಬೈರಿ, ಕಾರ್ಯದರ್ಶಿ ಲಯನ್ ಗಿರೀಶ್ ರಾವ್ ಮಾನೆ, ಖಜಾಂಚಿ ಲಯನ್ ಆದಿತ್ಯ ಎನ್.ಬೈರಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಈ ಎರಡು ಕ್ಲಬ್‍ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಿರುವುದು ಬಹಳ ಹೆಮ್ಮೆ ತರುವ ವಿಷಯ. ದೂರದೃಷ್ಟಿ, ಪರಿಸರ ಸಂರಕ್ಷಣೆ, ಯುವ ಜನತೆಯಲ್ಲಿ ಜಾಗೃತಿ, ಮಕ್ಕಳ ಕ್ಯಾನ್ಸರ್ ನಿಯಂತ್ರಣ, ಮಧುಮೇಹ ನಿವಾರಣೆ ಹಾಗೂ ಹಸಿವು ಮುಕ್ತ ಸಮಾಜ ನಿರ್ಮಾಣ ಇದರ ಮೂಲ ಉದ್ದೇಶವಾಗಿದೆ. ಮಧುಮೇಹ ಒಂದು ಸಾಂಕ್ರಾಮಿಕ ರೋಗ, ಪ್ರತಿ ನೂರು ಜನರಲ್ಲಿ ಒಬ್ಬರಿಗೆ ಹರಡುತ್ತದೆ. ನಾವು ದೂರದೃಷ್ಟಿಗೆ ಮಧುಮೇಹಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದೇವೆ ಎಂದು ವಿವರಿಸಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಿಸ್ತುಬದ್ಧವಾದ ಸಂಸ್ಥೆ ಎಂದರೆ ಲಯನ್ಸ್ ಹಾಗೂ ರೋಟರಿ ಎಂದರೆ ತಪ್ಪಾಗಲಾರದು. ನೂರಾರು ವರ್ಷಗಳು ನಡೆದು ಇನ್ನೂ ಸಾವಿರಾರು ವರ್ಷಗಳು ನಡೆಯುವ ಸಂಸ್ಥೆ ಎಂದರೆ ಈ ಎರಡು ಸಂಸ್ಥೆಗಳು. ಯಾವ ಸಂಸ್ಥೆ ಒಳ್ಳೆಯ ಉದ್ದೇಶವಿಟ್ಟುಕೊಂಡಿರುತ್ತದೋ ಅದು ಬೆಳೆಯುತ್ತದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷರಾದ ಲಯನ್ ಸಿ.ಮೋಹನ್‍ಕುಮಾರ್ ಹಾಗೂ ಲಯನ್ ಎಲ್.ವಿ.ಶ್ರೀನಿವಾಸ್, ರವಿಕುಮಾರ್, ಉಪಸ್ಥಿತರಿದ್ದರು.

Translate »