ಗೂಡ್ಸ್ ವಾಹನ ಪಲ್ಟಿ: ಚಾಲಕ ಸಾವು
ಮೈಸೂರು

ಗೂಡ್ಸ್ ವಾಹನ ಪಲ್ಟಿ: ಚಾಲಕ ಸಾವು

July 7, 2018
  •  ಹೆದ್ದಾರಿ ತಡೆದು, ಟೈರ್‍ಗೆ ಬೆಂಕಿ ಹಚ್ಚಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ
  • ಕೆಲ ಕಾಲ ಸಂಚಾರ ಸ್ಥಗಿತ, ವೇಗಮಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಭರವಸೆ

ತಗಡೂರು:  ಗೂಡ್ಸ್ ವಾಹನವೊಂದು ಪಲ್ಟಿ ಹೊಡೆದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ಶುಕ್ರವಾರ ನಡೆದಿದೆ.

ಚಾಮರಾಜನಗರ ಫೈರಾಜ್‍ವುಲ್ಲಾ ಖಾನ್(29) ಮೃತಪಟ್ಟ ವ್ಯಕ್ತಿ. ಫೈರಾಜ್ ವುಲ್ಲಾ ಖಾನ್ ಅವರು ಚಾಮರಾಜನಗರ ದಿಂದ ಮಹೇಂದ್ರ ಪಿಕಪ್ ವಾಹನದಲ್ಲಿ ತೆರಳುತ್ತಿದಾಗ ದೊಡ್ಡಕವಲಂದೆ ಗ್ರಾಮದ ಜೇವರ್ಗಿ ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150/ಎ ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ಅವರ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಫೈರಾಜ್ ವುಲ್ಲಾ ಖಾನ್ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ದೇಹವನ್ನು ನಂಜನಗೂಡು ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ನಂಜನ ಗೂಡಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕವಲಂದೆ ಪಿಎಸ್‍ಐ ರವಿಕುಮಾರ್ ತಿಳಿಸಿದರು.
ಗ್ರಾಮಸ್ಥರ ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ತಡೆದು, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕಾಲೇಜಿನ ಮುಂಭಾಗದಿಂದ 1 ಕಿ.ಮೀ. ವರೆಗೆ ರಸ್ತೆಯ ಡಾಂಬರು ತೀರ ನಯವಾಗಿದೆ. ಇದರಿಂದ ಯಾವುದೇ ವಾಹನಗಳು ಬಂದರೂ ಜಾರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಚಾಲಕರು ವೇಗವಾಗಿ ವಾಹನವನ್ನು ಚಲಾಯಿಸಿ ಕೊಂಡು ಬರುವಾಗ ಸ್ವಲ್ಪ ಎಚ್ಚರ ತಪ್ಪಿ ದರೂ ವಾಹನಗಳು ಅಪಘಾತಕ್ಕೀಡಾ ಗುವ ಸಾಧ್ಯತೆಯಿದೆ. ರಸ್ತೆ ಬದಿಯಲ್ಲಿಯೇ ಶಾಲಾ-ಕಾಲೇಜು ಇರುವುದರಿಂದ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆ ಯಾದರೆ ಯಾರು ಹೊಣೆಗಾರರಾಗುತ್ತಾರೆ. ಈ ಸಮಸ್ಯೆ ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆ ಸಿದ್ದರಿಂದ ಹೆದ್ದಾರಿಯಲ್ಲಿ 2 ಕಿ.ಲೋ. ಮೀಟರ್‍ವರೆಗೆ ವಾಹನಗಳ ಸಂಚರ ಸ್ಥಗಿತ ಗೊಂಡು ವಾಹನ ದಟ್ಟಣೆ ಉಂಟಾಯಿತು.

ಸ್ಥಳಕ್ಕೆ ಸರ್ಕಲ್ ಇನ್‍ಸ್ಪೆಕ್ಟರ್ ಶಿವಮೂರ್ತಿ ಭೇಟಿ ನೀಡಿ ಪ್ರತಿಭಟನೆ ಕೈ ಬಿಡುವಂತೆ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿ ದರು. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಕಾಲೇಜಿನ ಮುಂಭಾಗ ಬ್ಯಾರಿಕೇಟ್ ಅಳವಡಿಸಿ ವಾಹನಗಳ ವೇಗಮಿತಿಯನ್ನು ನಿಯಂತಿಸಲಾಗುವುದು ಎಂದು ಇನ್‍ಸ್ಪೆಕ್ಟರ್ ಶಿವಮೂರ್ತಿ ಭರವಸೆ ನೀಡಿದರು. ಬಳಿಕ, ಪ್ರತಿಭಟನೆಯನ್ನು ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ದೊಡ್ಡಕವಲಂದೆ ಗ್ರಾಮಸ್ಥರು ಮತ್ತು ಶಾಲಾ, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »