ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ
ಮಂಡ್ಯ

ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ

May 30, 2018

ಮೇಲುಕೋಟೆ:  ವಿವಾಹ ವಾಗುವಂತೆ ಪೀಡಿಸುತ್ತಿದ್ದ ಯುವಕ ಮತ್ತು ಆತನ ಸ್ನೇಹಿತರಿಂದ ಅಪಹರಣ ಕ್ಕೊಳಗಾಗಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಜಾಣ್ಮೆಯಿಂದ ತಪ್ಪಿಸಿಕೊಂಡು ಬಂದು ಪೋಷಕರ ಸಹಾಯದಿಂದ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಮಂಗಳ ವಾರ ನಡೆದಿದೆ.

ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿ, ಮೈಸೂರಿನ ಮಹಾರಾಣ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಅಪಹರಣ ಕಾರರಿಂದ ತಪ್ಪಿಸಿಕೊಂಡು ಬಂದ ಯುವತಿ. ಈಕೆಯನ್ನು ಬಹು ದಿನಗಳಿಂದ ವಿವಾಹವಾಗುವಂತೆ ಪೀಡಿಸುತ್ತಿದ್ದ ನರಹಳ್ಳಿ ಗ್ರಾಮದ ಯುವಕ ಕುಮಾರ್ ಅಲಿಯಾಸ್ ಕುಡುಕ ಮತ್ತು ಆತನ ಮೂವರು ಸ್ನೇಹಿತರು ಇದೀಗ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಮೇಲುಕೋಟೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ: ಸೋಮವಾರ ನಿಗದಿ ಯಾಗಿದ್ದ ಬಯಾಲಜಿ ಪರೀಕ್ಷೆ ಬರೆಯಲು ಬೆಳಿಗ್ಗೆ 9.30ರಲ್ಲಿ ಕಾಲೇಜಿಗೆ ತೆರಳಲು ಸಿಂಗ್ರಿಗೌಕೊಪ್ಪಲು ಗ್ರಾಮದಿಂದ ಬೆಳ್ಳಾಳೆಗೆ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿನಿ ಯನ್ನು ಕಾರಿನಲ್ಲಿ ಬಂದ ನರಹಳ್ಳಿಯ ಕುಮಾರ ಮತ್ತು ಆತನ ಸ್ನೇಹಿತರಾದ ಸಿಂಗ್ರೀಗೌಡನಕೊಪ್ಪಲಿನ ಪರಮೇಶ್ ಅಲಿಯಾಸ್ ರಾಣ , ಚೀಕನಹಳ್ಳಿಯ ಶಿವಕುಮಾರ್ ಅಲಿಯಾಸ್ ಕಪ್ಪೆ ಹಾಗೂ ಸೇರಿದಂತೆ ಮೂವರು ಪುಸಲಾಯಿಸಿ ಕಾರು ಹತ್ತಿಸಿಕೊಂಡು ಮಡಿಕೇರಿಗೆ ಕರೆದೊಯ್ದಿ ದ್ದಾರೆ. ಬಳಿಕ ಮಧ್ಯಾಹ್ನದ ವೇಳೆಗೆ ಅಲ್ಲಿನ ಹೋಂ ಸ್ಟೇ ಒಂದರಲ್ಲಿ ಆಕೆಯನ್ನು ಇರಿಸಿದ ಆರೋಪಿಗಳು ಕುಮಾರ್ ಜೊತೆಗೆ ಮದುವೆ ಸಿದ್ಧತೆಗಾಗಿ ಹಣ ತರಲು ತೆರಳಿದ್ದಾರೆ. ಈ ವೇಳೆ ಸಹಾಯಕ್ಕಾಗಿ ಯುವತಿ ಕೂಗಿಕೊಂಡಿ ದ್ದಾಳೆ. ತಕ್ಷಣ ಅಕ್ಕಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಆಕೆಯ ಸಹಾಯಕ್ಕೆ ಧಾವಿಸಿ ಕುಮಾರ್ ಸೇರಿ ದಂತೆ ಇನ್ನಿತರರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿ, ಬುದ್ದಿವಾದ ಹೇಳಿ ಯುವತಿ ಯನ್ನು ಮರಳಿ ಆಕೆಯ ಮನೆಗೆ ಸುರಕ್ಷಿತ ವಾಗಿ ಬಿಡುವಂತೆ ತಾಕೀತು ಮಾಡಿ ಅವರ ಫೋಟೋಗಳು, ಮೊಬೈಲ್ ನಂ. ಪಡೆದು ಸಂಜೆ 4 ಗಂಟೆ ವೇಳೆಗೆ ವಾಪಸ್ಸು ಕಳುಹಿಸಿದ್ದಾರೆ.

ಮಡಿಕೇರಿಯಿಂದ ಆರೋಪಿಗಳು ಯುವತಿಯನ್ನು ವಾಪಸ್ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಕಾರು ಸುಂಟಿಕೊಪ್ಪ ಬಳಿ ಅಪಘಾತಕ್ಕೀ ಡಾಗಿದೆ. ಈ ವೇಳೆ ಆರೋಪಿಗಳಿಂದ ತಪ್ಪಿಸಿ ಕೊಂಡ ಆಕೆ ಮೈಸೂರಿಗೆ ಬಸ್ ಹತ್ತಿ 8 ಗಂಟೆಗೆ ವೇಳೆಗೆ ಬಂದಿದ್ದಾಳೆ. ನಂತರ ಪಾಂಡವಪುರಕ್ಕೆ ಬಂದು ಪೋಷಕರನ್ನು ಕರೆಸಿಕೊಂಡು ಸುರಕ್ಷಿತವಾಗಿ ಮನೆ ತಲುಪಿ ಪೋಷಕರಿಗೆ ನಡೆದ ವಿಚಾರವನ್ನು ವಿವರವಾಗಿ ತಿಳಿಸಿ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಎಸ್‍ಐ ಸೋಮೇ ಗೌಡ ಅವರು ವಿದ್ಯಾರ್ಥಿನಿಗೆ ಸಾಂತ್ವನ ಹೇಳಿ, ಆಕೆಯ ದೂರಿನ ಮೇರೆಗೆ ಅಪಹರಣ ಕ್ಕೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಪ್ರಮುಖ ಆರೋಪಿ ಕುಮಾರ್‍ನ ಮತ್ತೋರ್ವ ಸ್ನೇಹಿತ ಹರೀಶ್ ಮೇಲೂ ಪ್ರಕರಣ ದಾಖಲಾಗಿದೆ.

Translate »