ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ
ಹಾಸನ

ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

October 11, 2018

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಗರಸಭೆ ಸಭಾಂಗಣದಲ್ಲಿಂದು ನಗರ ವ್ಯಾಪ್ತಿ ಜನತೆಯ ಕುಂದು ಕೊರತೆಗಳ ಕುರಿತು ಅಹವಾಲು ಸ್ವೀಕರಿಸಿದರು.

ಹಾಸರ ನಗರಸಭೆ ನೇತೃತ್ವದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ 100ಕ್ಕೂ ಅಧಿಕ ಮಂದಿ ಪಾಲ್ಗೊಂಡು, ವೈಯಕ್ತಿಕ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗ್ನೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನ್ಯಾಯಸಮ್ಮತ ಬೇಡಿಕೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಅಧಿಕಾರಿಗಳು ಇನ್ನಷ್ಟು ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ, ನಗರದ ರಸ್ತೆಗಳ ಅಭಿವೃದ್ಧಿಯತ್ತ ನಗರಸಭೆ ಗಮನ ಹರಿಸ ಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಜನತೆ ನಗರ ದಲ್ಲಿ ಒತ್ತುವರಿಯಾಗಿರುವ ಕನ್ಸರ್ವೆನ್ಸಿಗಳ ತೆರವು, ಖಾಸಗಿ ಆಸ್ಪತ್ರೆಗಳಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ರಸ್ತೆಗಳ ದುರಸ್ತಿ, ಕುಡಿಯುವ ನೀರು ಪೂರೈಕೆಯಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರು.

ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿಗಳು ಮಾತನಾಡಿ, ನಮ್ಮ ಬಡಾವಣೆಯನ್ನು ಶೀಘ್ರ ಅಭಿವೃದ್ಧಿಪಡಿಸಬೇಕು. ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಡಾವಣೆ ಅಭಿವೃದ್ಧಿಗೆ ನಗರಸಭೆಗೆ ಸರ್ಕಾರದಿಂದ 6 ಕೋಟಿ ರೂ. ಬಿಡುಗಡೆಯಾಗಿದ್ದರೂ ಅದನ್ನು ಸದ್ಬ ಳಕೆ ಮಾಡಿಕೊಂಡಿಲ್ಲ. ಅಲ್ಲದೆ ಇತರ ಬಡಾವಣೆಗಳಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಕೂಡಲೇ ಇದನ್ನು ಕಡಿಮೆ ಮಾಡಬೇಕು. ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸಬೇಕು ಎಂದು ಕೋರಿದರು.

ನಿವಾಸಿಗಳ ಮನವಿ ಆಲಿಸಿದ ಜಿಲ್ಲಾಧಿಕಾರಿ ಚನ್ನಪಟ್ಟಣ ಕೆಹೆಚ್‍ಬಿ ಬಡಾವಣೆ ನೂತನವಾಗಿ ನಿರ್ಮಾಣಗೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಮೃತ್ ಯೋಜನೆಯಲ್ಲಿ ಹೇಮಾವತಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. ಈ ಬಡಾವಣೆಯಲ್ಲಿ ಭೂಮಿ ದರ ಹೆಚ್ಚಾಗಿರುವುದರಿಂದ ತೆರಿಗೆ ಪ್ರಮಾಣವೂ ಅದಕ್ಕೆ ಅನುಗುಣವಾಗಿ ವಿಧಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ನಗರದಲ್ಲಿ ಸರ್ಕಾರಿ ರಸ್ತೆಗಳ ಒತ್ತುವರಿ, ಪಾರ್ಕಿಂಗ್ ಸಮಸ್ಯೆಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು ಕಾಲಮಿತಿಯೊಳಗೆ ದೊರೆಯ ಬೇಕು. ನಗರಸಭೆಯಲ್ಲಿ ಸಕಾಲ ಯೋಜನೆಯ ಕೌಂಟರ್ ಪ್ರಾರಂಭಿಸಿ, ನಗರದ ಸೌಂದರ್ಯಾ ಭಿವೃದ್ಧಿ ಹಾಗೂ ಜನ ಸಮಸ್ಯೆ ಬಗ್ಗೆ ಗಮನ ಹರಿಸಿ. ಆಶ್ರಯ ಅಥವಾ ಇನ್ನಿತರೆ ಯೋಜನೆಯಲ್ಲಿ ನಿವೇಶನ, ಮನೆ ಒದಗಿ ಸುವಂತೆ ವಸತಿರಹಿತರು ಮನವಿ ಮಾಡಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದು ನಗರ ಸಭೆ ಆಯುಕ್ತರಿಗೆ ಡಿಸಿ ನಿರ್ದೇಶಿಸಿದರು.

ಇದೇ ವೇಳೆ ಪೌರ ಕಾರ್ಮಿಕರು ಜಿಲ್ಲಾಧಿ ಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿ ಕೊಂಡರು. ತಮ್ಮ ಸೇವಾ ಸಂದರ್ಭದಲ್ಲಾ ಗುತ್ತಿರುವ ತೊಂದರೆ ಸರಿಪಡಿಸಬೇಕು. ವಸತಿ ವ್ಯವಸ್ಥೆಗಳನ್ನು ಮಾಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಾವು ಪ್ರತ್ಯೇಕವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಗರಸಭೆ ಆಯುಕ್ತರಾದ ಪರಮೇಶ್ ಹಾಗೂ ನಗರಸಭೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಪುರುಷೋತ್ತಮ್ ಹಾಜರಿದ್ದು, ಜಿಲ್ಲಾಧಿಕಾರಿಗಳಿಗೆ ಅಗತ್ಯ ಮಾಹಿತಿ ಒದಗಿಸಿದರು.

Translate »