ಮೈಸೂರು: ಎರಡು ಪ್ರತ್ಯೇಕ ಹತ್ಯೆ ಪ್ರಕರಣಗಳ ನಾಲ್ವರು ಹಂತಕರಿಗೆ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನಜರ್‍ಬಾದ್‍ನ ಪೀಪಲ್ಸ್ ಪಾರ್ಕ್ ಕಾವಲುಗಾರ ವೆಂಕಟರಂಗಯ್ಯ ಹತ್ಯೆ ಮಾಡಿದ್ದ ಎಸ್.ಶೇಖರ್, ಸಿ.ಆರ್. ಪ್ರದೀಪ್ ಮತ್ತು ಕುಂಟ ಹಾಗೂ ಕ್ಷುಲ್ಲಕ ಕಾರಣಕ್ಕೆ ದಿನೇಶ್ ಎಂಬುವವರನ್ನು ಹತ್ಯೆ ಮಾಡಿದ ಮನುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಂಗಳಮುಖಿಯರಿಂದ ಹಣ ದೋಚಲೆಂದು ಎಸ್.ಶೇಖರ್, ಸಿ.ಆರ್.ಪ್ರದೀಪ್ ಮತ್ತು ಕುಂಟ, 2016ರ ಅ.21ರಂದು ಪೀಪಲ್ಸ್‍ಪಾರ್ಕ್‍ಗೆ ಬಂದಿದ್ದು, ಇವರನ್ನು ಕಂಡ ಮಂಗಳಮುಖಿಯರು ಪರಾರಿಯಾಗಿದ್ದಾರೆ.
ಈ ವೇಳೆ ಆರೋಪಿಗಳು ಹಣಕ್ಕಾಗಿ ಕಾವಲುಗಾರ ವೆಂಕಟರಂಗಯ್ಯರ ಕೊಠಡಿಗೆ ಹೋಗಿ ಮೊಬೈಲ್ ಕಳವು ಮಾಡಲು ಯತ್ನಿಸಿದ್ದಾರೆ. ಈ ವೇಳೆ ವೆಂಕಟರಂಗಯ್ಯ ಪ್ರತಿರೋಧ ಒಡ್ಡಿದಾಗ ಕೊಲೆ ಮಾಡಿ ಮೊಬೈಲ್ ಮತ್ತು 70 ರೂ. ಕಿತ್ತುಕೊಂಡು ಪರಾರಿಯಾಗಿದ್ದರು.
ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್ ಎಂಬಾತ ಮನುವಿನ ಬಟ್ಟೆ ಬಿಚ್ಚಿಸಿ ಅವಮಾನಿಸಿದ್ದರು. ಇದರಿಂದ ಕೋಪಗೊಂಡಿದ್ದ ಮನು, ದಿನೇಶ್‍ಗೆ ಮದ್ಯಪಾನ ಮಾಡಿಸಿ ಟವೆಲ್‍ನಿಂದ ಕುತ್ತಿಗೆಗೆ ಬಿಗಿದು ಹತ್ಯೆಗೈದಿದ್ದನು. ಇಂದು ನ್ಯಾಯಾಲಯ ಆರೋಪಿ ಮನುಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದೆ.