ಶೀಘ್ರದಲ್ಲೇ ದರೋಡೆಕೋರರ ವಿರುದ್ಧ ಕ್ರಮ: ಹೆಚ್.ಡಿ.ರೇವಣ್ಣ
ಹಾಸನ

ಶೀಘ್ರದಲ್ಲೇ ದರೋಡೆಕೋರರ ವಿರುದ್ಧ ಕ್ರಮ: ಹೆಚ್.ಡಿ.ರೇವಣ್ಣ

September 2, 2018

ಹಾಸನ:  ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡ ದೊಡ್ಡ ಕಂಪನಿಗಳು ಕೋಟ್ಯಾಂತರ ರೂ. ವಂಚಿಸಿದ್ದು, ಶೀಘ್ರದಲ್ಲೇ ದರೋಡೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವಂತರು ಕಂಪನಿ ಸ್ಥಾಪನೆ ಹೆಸರಿನಲ್ಲಿ ನೂರಾರು ಎಕರೆ ಜಾಗ ಕಬಳಿಸು ತ್ತಿದ್ದಾರೆ. ಈ ಕುರಿತು ಸ್ಥಳೀಯರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ವಂಚಿಸಿರುವ ಕಂಪನಿಗಳ ವಿರುದ್ಧ ವರದಿ ಪಡೆದು ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಇಂತಹ ಮೋಸದ ಜಾಲಗಳು ಸಾಕಷ್ಟಿದ್ದು, ಇಂತಹ ಭೂಗಳ್ಳರು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೈಗಾರಿಕೆ ಹೆಸರಿನಲ್ಲಿ ಜಮೀನು ಪಡೆದು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಯಾರೇ ಅಡ್ಡಿಪಡಿಸಿದರೂ ಕೂಡ ಕ್ರಮ ಕೈಗೊಂಡೇ ತೀರುತ್ತೇನೆ ಎಂದು ಗುಡುಗಿದರು.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಈಗಾಗಲೇ 2,446 ಎಕರೆ ಜಮೀನನ್ನು ವಿವಿಧ ಕೈಗಾರಿಕೆ ಗಳಿಗೆ ಮಂಜೂರು ಮಾಡಿದೆ. ಇದರಲ್ಲಿ 400 ಎಕರೆಯನ್ನು ಹಿಮ್ಮತ್ ಸಿಂಗ್ ಕಾರ್ಖಾನೆಗೆ ನೀಡಲಾಗಿದ್ದು, ಯುವಕರಿಗೆ ಉದ್ಯೋಗ ತರಬೇತಿ ಕೊಡುವ ಹೆಸರಿನಲ್ಲಿ ಈ ಕಂಪನಿ ಎಕರೆಗೆ 16 ಲಕ್ಷ ರೂ.ನಂತೆ ಭೂಮಿ ಕೊಂಡುಕೊಂಡು, 500 ಕೋಟಿ ರೂ.ನಷ್ಟು ಹಣ ಸರ್ಕಾರ ದಿಂದ ಸಬ್ಸಿಡಿ ಸಾಲ ಪಡೆದು, ನೂರಾರು ಕೋಟಿ ಲೂಟಿ ಮಾಡಿದೆ. ಅಲ್ಲದೆ ಆಪೆÇ್ಟೀ ಇನ್‍ಫ್ರಾಸ್ಟ್ರಕ್ಚರ್ ಕಂಪನಿಯು ಸರ್ಕಾರಕ್ಕೆ ಮೋಸ ಮಾಡಿದ್ದು, 10 ಕೋಟಿ ರೂ. ನೀಡಿ 250 ಎಕರೆ ಜಮೀನನ್ನು ಪಡೆದಿದೆ. ವಿದೇಶದಿಂದಲೂ 100 ಕೋಟಿ ಸಾಲ ಪಡೆದಿದೆ. ಈ ಕೈಗಾರಿಕೆಯವರು ಜಮೀನು ಪಡೆದು ಬೇರೆಯವರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಅಧಿಕಾರಿಗಳು ಶಾಮೀಲಾಗಿ ಸರ್ಕಾರಿ ಜಮೀನು ಲೂಟಿ ಮಾಡಿದ್ದಾರೆ. ಪ್ರತಿ ಎಕರೆಗೆ ರೈತರ ಬಳಿ ಒಂದರಿಂದ ಎರಡು ಲಕ್ಷ ರೂ.ಗೆ ಖರೀದಿಸಿ, ವಿವಿಧ ಕಂಪನಿಗೆ ನೀಡಿದ್ದಾರೆ. ಈಗಾಗಲೇ ಸ್ಥಾಪನೆ ಆಗಿರುವ ಕೆಲ ಕಾರ್ಖಾನೆಗಳಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಹೊರಗಿನ ರಾಜ್ಯದ ಯುವಕರಿಗೆ ಮಾತ್ರ ಕೆಲಸ ನೀಡಿ, ಸ್ಥಳೀಯ ವಿದ್ಯಾವಂತರನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆಯೂ ಕೂಡ ಮಾಹಿತಿ ಪಡೆಯಲಾಗು ವುದು. ಸ್ಥಳೀಯರಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

Translate »