ಅಕ್ರಮವಾಗಿ ಮರ ಕಡಿದವರ ವಿರುದ್ಧ ಕ್ರಮ
ಮಂಡ್ಯ

ಅಕ್ರಮವಾಗಿ ಮರ ಕಡಿದವರ ವಿರುದ್ಧ ಕ್ರಮ

June 20, 2018

ಮೇಲುಕೋಟೆ: ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವ ಜೊತೆಗೆ, ಸರ್ಕಾರಿ ಜಾಗದಲ್ಲಿ ಬೆಳೆದ ಮರಗಳನ್ನೂ ಸಹ ಕಡಿದು ಸಾಗಿಸಿರುವುದೂ ಸೋಮವಾರ ನಡೆದ ಸರ್ವೆ ವೇಳೆ ಬೆಳಕಿಗೆ ಬಂದಿದ್ದು, ಅಕ್ರಮವಾಗಿ ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಆರ್‍ಎಫ್‍ಓ ಜೀತ್ ತಿಳಿಸಿದ್ದಾರೆ.

ಮೇಲುಕೋಟೆಯ ಕೆ.ಬಿ.ನರಸಿಂಹೇ ಗೌಡ ಎಂಬುವವರು ಸರ್ಕಾರಿ ಬಾಲಕರ ಶಾಲಾ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಲಕ್ಷಾಂತರ ರೂ. ಮೌಲ್ಯದ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿ ದ್ದಾರೆ ಎಂದು ಮುಖ್ಯ ಶಿಕ್ಷಕ ಜವರೇಗೌಡ ಪಾಂಡವಪುರ ವಲಯ ಅರಣ್ಯಾಧಿಕಾರಿ, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಪಾಂಡವ ಪುರ ತಹಶೀಲ್ದಾರ್‍ಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ಅಪರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಜಮೀನಿನ ಸರ್ವೆ ನಡೆಸಿ, ಗಡಿ ಗುರುತಿಸಿ ಕಾನೂನು ಕ್ರಮ ಜರುಗಿಸಲು ಸಹಕರಿಸುವಂತೆ ಭೂ ಮಾಪನ ಇಲಾಖೆಗೆ ಸೂಚಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕಾನೂನು ಕ್ರಮ ಜರುಗಿಸಲು ಅನುವಾಗುವಂತೆ ಸರ್ವೇ ಮಾಡಿ ವರದಿ ನೀಡುವಂತೆ ಕೋರಿದ್ದರು.

ಈ ಹಿನ್ನೆಲೆಯಲ್ಲಿ ಮೇಲುಕೋಟೆಗೆ ಆಗಮಿಸಿದ ಸರ್ವೇಯರ್ ವೆಂಕಟೇಶ್ ಸರ್ವೆ ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಸೇರಿದ 2 ಎಕರೆ ಜಮೀನಿನ ಗಡಿ ಗುರುತು ಮಾಡಿ ಮಹಜರ್ ಮಾಡಿ ದರು. ಈ ವೇಳೆ ಸರ್ಕಾರಿ ಶಾಲೆಯ ಸರ್ವೆ ನಂಬರ್ 70 (1 )ಬಿ ಮತ್ತು 70 (2) ಬಿಗೆ ಸೇರಿದ 1.5 ಎಕರೆ, ಹಾಗೂ ಸರ್ವೆ ನಂಬರ್ 68 ಕ್ಕೆ ಸೇರಿದ ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಲಕ್ಷಾಂತರ ರೂ. ಮೌಲ್ಯದ ನೀಲಗಿರಿ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ಅಕ್ರಮ ವಾಗಿ ಕಡಿದು ಸಾಗಿಸಿರುವುದು ದೃಢಪಟ್ಟಿದೆ.

ಈ ವೇಳೆ ಮಹಜರ್ ನಡೆಸಿದ ಸರ್ವೇ ಯರ್ ವೆಂಕಟೇಶ್ ಮಾತನಾಡಿ, ಮುಖ್ಯ ಶಿಕ್ಷಕರು ಸಹಿ ಪಡೆದ ನಂತರ ಸರ್ವೇ ವರದಿಯನ್ನು ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲಾ ಗುತ್ತದೆ. ಗಡಿಗಳಿಗೆ ತಕ್ಷಣ ಕಲ್ಲು ಅಳವಡಿಸಿ ಬೇಲಿ ಹಾಕಿಸಿ ಸರ್ಕಾರಿ ಶಾಲಾ ಆಸ್ತಿ ರಕ್ಷಣೆ ಮಾಡಿಕೊಳ್ಳಬಹುದು ಎಂದರು.

ಮಹಜರ್  ನಲ್ಲಿ ಭಾಗವಹಿಸಿದ ಮೇಲು ಕೋಟೆ ಉಪವಲಯ ಅರಣ್ಯ ಸಂರಕ್ಷಣಾ ಧಿಕಾರಿ ಜೀತ್ ವಿವರ ನೀಡಿ, ಸರ್ಕಾರಿ ಬಾಲಕರ ಶಾಲೆ ಹಾಗೂ ಸರ್ಕಾರಿ ಜಮೀನಿ ನಲ್ಲಿ ಬೆಳೆದ ನೀಲಗಿರಿ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅತಿಕ್ರಮ ಪ್ರವೇಶ ಮಾಡಿ ಮರ ಕಡಿದು ಸಾಗಿರುವ ಆರೋಪಿ ಕೆ.ಬಿ.ನರಸಿಂಹೇಗೌಡ ವಿರುದ್ಧ ಅರಣ್ಯ ಇಲಾಖೆಯ ನಿಯಮದಂತೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮರಗಳನ್ನು ಲಾರಿಗಳಲ್ಲಿ ಸಾಗಿಸಿದ ವ್ಯಕ್ತಿಗಳಿಂದಲೂ ಹೇಳಿಕೆ ಪಡೆಯಲಾ ಗುತ್ತದೆ ಎಂದರು.

ಪರಿಹಾರಕ್ಕೆ ದೂರು ನೀಡಿ: ಮರ ಕಡಿದು ಲಾರಿಗಳಿಗೆ ತುಂಬಿ ಸಾಗಿಸಲು ಅವಕಾಶ ನೀಡದೇ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಬೇಕಿತ್ತು ಎಂದ ಜೀತ್ ಸರ್ವೇ ವರದಿ ಹಾಗೂ ಕಡಿದ ಮರಗಳ ಅಂದಾಜು ಮೌಲ್ಯವನ್ನು ಅರಣ್ಯ ಇಲಾಖೆಯಿಂದ ಪಡೆದು ಪರಿಹಾರದ ಮೊತ್ತವನ್ನು ಶಾಲೆಗೆ ಮರುಪಾವತಿಸಿ ಕೊಳ್ಳುವ ಸಂಬಂಧ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ದೂರು ದಾಖಲಿಸಬೇಕು. ಇದೇ ವೇಳೆ ಜೊತೆಗೆ 20 ವರ್ಷಗಳಿಂದ ಮರಗಳನ್ನು ನಾಲ್ಕೈದು ಸಲ ಕಡಿದ ಬಗ್ಗೆಯೂ ಮುಖ್ಯ ಶಿಕ್ಷಕರು ತಕ್ಷಣ ಪೊಲೀಸರಿಗೆ ದೂರು ನೀಡಿ ಶಾಲೆಗೆ ಪರಿಹಾರದ ಹಣ ಪಡೆದುಕೊಳ್ಳಲು ಕ್ರಮವಹಿಸಿ ಎಂದರು.

ಸರ್ವೇ ಕಾರ್ಯದ ವೇಳೆ ಮುಖ್ಯ ಶಿಕ್ಷಕ ಜವರೇಗೌಡ, ಹಿರಿಯ ವಿದ್ಯಾರ್ಥಿ ಹಾಗೂ ಗ್ರಾಮದ ಮುಖಂಡ ಶಶಿಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಎಂ.ಬಿ ಚೆಲುವೇ ಗೌಡ, ಶಿಕ್ಷಕ ಸಂತಾನರಾಮನ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Translate »