ಮೂಡಲಕೊಪ್ಪಲು ಗ್ರಾಮವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸಲು ಕ್ರಮ: ಸಿಎಸ್‍ಪಿ ಭರವಸೆ
ಮಂಡ್ಯ

ಮೂಡಲಕೊಪ್ಪಲು ಗ್ರಾಮವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸಲು ಕ್ರಮ: ಸಿಎಸ್‍ಪಿ ಭರವಸೆ

October 4, 2018

ಪಾಂಡವಪುರ:  ‘ಗ್ರಾಮೀಣ ಪ್ರದೇಶದ ರೈತರ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮೂಡಲಕೊಪ್ಪಲು ಗ್ರಾಮವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಲು ಕ್ರಮವಹಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಮೂಡಲಕೊಪ್ಪಲು ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮೂಡಲಕೊಪ್ಪಲು ಗ್ರಾಮದ ಸುತ್ತಲಿನ ಗ್ರಾಮಗಳ ರೈತರ ಮಕ್ಕಳು ಶಿಕ್ಷಣ ಪಡೆಯಲು ದೂರ ಪ್ರಯಾಣ ಮಾಡಬೇಕಿತ್ತು. ಇದರಿಂದ ಹಲವು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದ್ದರು. ಇದನ್ನು ತಪ್ಪಿಸಲು ಇಲ್ಲಿಯೇ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಸಹಿತ ಹೆಣ್ಣು ಮಕ್ಕಳ ಪ್ರೌಢಶಾಲೆ, ಕಾಲೇಜು ಮತ್ತು ಮೊರಾರ್ಜಿ ವಸತಿ ಕಾಲೇಜು ಪ್ರಾರಂಭಿಸಲಾಗುವುದು ಎಂದರು.

12 ವರ್ಷದ ಹಿಂದೆಯೇ ಇಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕಿತ್ತು. ಆದರೆ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿದ್ದ ಜಮೀನು ವಿವಾದವನ್ನು ತಾಲೂಕಿನ ಪ್ರಮುಖ ನಾಯಕರೊಬ್ಬರು ಹುಟ್ಟಿ ಹಾಕಿದ್ದರಿಂದ ಕಾಮಗಾರಿ ಕುಂಠಿತವಾಯಿತು ಎಂದರು.

ವಸತಿ ಶಾಲೆಯ ಕಟ್ಟಡ ನಿರ್ಮಾಣ, ಹಾಸ್ಟೆಲ್ ಮತ್ತು ಶಿಕ್ಷಕರ ವಸತಿ ಸಮುಚ್ಛಯ ನಿರ್ಮಾಣಕ್ಕೆ 10 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಭಾಗದಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ಎಲ್ಲಾ ಗ್ರಾಮಗಳಿಗೂ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮೂಡಲ ಕೊಪ್ಪಲು ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಾಗಿ ಸೇರಿ ತಮಗೆ ಅಗತ್ಯವಿರುವ ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ, ಅದನ್ನು ಈಡೇರಿಸಲು ಕೂಡಲೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಕ್ಕನಹಳ್ಳಿ ಗ್ರಾಮದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸಲು ಹಾಗೂ ಬನ್ನಂಗಾಡಿ ಗ್ರಾಮದಲ್ಲಿ ಹೆಚ್ಚು ಬೆಳೆಯುವ ಹೂವು ಗಳನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾ ಗುವುದು. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಸಿ.ಅಶೋಕ್, ಎಚ್.ತ್ಯಾಗರಾಜು, ತಾಪಂ ಅಧ್ಯಕ್ಷೆ ಪೂರ್ಣಿಮಾ ವೆಂಕಟೇಶ್, ಸದಸ್ಯ ಸಿ.ಎಸ್.ಗೋಪಾಲೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಎಪಿಎಂಸಿ ನಿರ್ದೇಶಕರಾದ ಎಸ್.ಕೆ.ದೇವೇಗೌಡ, ಆನಂದ್, ವಿಎಸ್‍ಎಸ್‍ಎನ್‍ಬಿ ಅಧ್ಯಕ್ಷ ಚಿಕ್ಕಣ್ಣ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ, ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಇಓ ಮಹೇಶ್, ಸಮಾಜ ಕಲ್ಯಾಣಾಧಿಕಾರಿ ರವಿಶಂಕರ್, ಮುಖಂಡರಾದ ಎಸ್.ಆನಂದ್, ಹೊಸಕೋಟೆ ಪುಟ್ಟಣ್ಣ, ಎಂ.ಬಿ.ಶ್ರೀನಿವಾಸ್, ತಿಮ್ಮೇಗೌಡ, ರಾಮಚಂದ್ರ, ಬೋರೇಗೌಡ(ಪಾಪಣ್ಣ), ಅಶ್ವಥ್‍ಕುಮಾರೇಗೌಡ, ಬೆಟ್ಟಸ್ವಾಮೀಗೌಡ, ಶಿವಶಂಕರ್, ಕುಳ್ಳೇಗೌಡ, ಕರಿಗೌಡ, ರಾಜಣ್ಣ, ಗುತ್ತಿಗಾರಾದ ಎನ್.ಪರಮೇಶ್, ರಾಜು ಹಾಜರಿದ್ದರು.

Translate »