ಅಡ್ಡಾದಿಡ್ಡಿ ಚಲಿಸಿದ ಲಾರಿ: ಮಂಡ್ಯದಲ್ಲಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು
ಮೈಸೂರು

ಅಡ್ಡಾದಿಡ್ಡಿ ಚಲಿಸಿದ ಲಾರಿ: ಮಂಡ್ಯದಲ್ಲಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು

October 3, 2018

ಮಂಡ್ಯ: ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟು, ಹತ್ತಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದ ಗುತ್ತಲು ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಅಪಘಾತದಲ್ಲಿ ಶಶಾಂಕ್, ಆತನ ತಾಯಿ ಗಿರಿಜಮ್ಮ, ರಾಹುಲ್ ಮತ್ತು ರಫಿಉಲ್ಲಾ ಎಂಬುವರು ಸಾವನ್ನಪ್ಪಿದ್ದು, ನಟರಾಜು ಮತ್ತು ವೆಂಕಟೇಶ್ ಎಂಬುವರನ್ನು ಬೆಂಗಳೂರಿನ ನಿಮ್ಹಾನ್ಸ್‍ಗೆ ರವಾನಿಸಲಾಗಿದೆ.

ವಿವರ: ಇಂದು ಸಂಜೆ 7 ಗಂಟೆ ಸುಮಾರಿನಲ್ಲಿ ಹೈದರಾ ಬಾದ್ ನೋಂದಣಿಯ ಲಾರಿ ಕೆ.ಎಂ.ದೊಡ್ಡಿಯಿಂದ ಮಂಡ್ಯ ಕಡೆಗೆ ಬರುತ್ತಿತ್ತು. ಮಂಡ್ಯ ನಗರದ ಗುತ್ತಲಿನ ಬೆನಕ ಸಮುದಾಯ ಭವನದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಅಡ್ಡಾದಿಡ್ಡಿ ಚಲಿಸಿ ರಸ್ತೆ ವಿಭಜಕದ ಮಧ್ಯೆ ಸಂಚರಿಸಿ ಕೊನೆಗೆ ವಿಭಜಕದ ನಡುವೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಲಾರಿಯು ಮೊದಲು ಶಶಾಂಕ್ ಮತ್ತು ಆತನ ತಾಯಿ ಗಿರಿಜಮ್ಮ ಅವರು ತೆರಳುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ಆನಂತರ 7 ದ್ವಿಚಕ್ರ ವಾಹನ ಮತ್ತು 1 ಆಟೋಗೆ ಗುದ್ದಿದೆ. ಒಂದು ಬೈಕ್ ಅಂತೂ ಲಾರಿ ಅಡಿಗೆ ಸಿಲುಕಿ ಒಂದಷ್ಟು ದೂರ ಎಳೆದೊಯ್ಯಲಾಗಿದೆ. ಈ ಅಪಘಾತದಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ತಾಯಿ-ಮಗ ಹಾಗೂ ಮತ್ತೊಂದು ಬೈಕ್‍ನಲ್ಲಿದ್ದ ರಾಹುಲ್ ಮತ್ತು ರಸ್ತೆ ಬದಿ ನಿಂತಿದ್ದ ತನ್ನ ಬೈಕ್ ತೆಗೆದುಕೊಳ್ಳಲು ಬಂದ ರಫಿಉಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಾಲ್ವರ ಮೃತದೇಹಗಳು ಗುರುತು ಸಿಗದಷ್ಟು ಛಿದ್ರವಾಗಿದ್ದು, ಅಪಘಾತದ ಭೀಕರತೆಯನ್ನು ತೋರಿಸುತ್ತಿತ್ತು. ಅಪಘಾತ ನಡೆಸಿದ ಲಾರಿ ಚಾಲಕ ಶಫಿ ಮಂಡ್ಯದ ಶಂಕರ ನಗರ ನಿವಾಸಿಯಾಗಿದ್ದು, ಈತ ಕೆ.ಎಂ.ದೊಡ್ಡಿಯಿಂದ ಲಾರಿಯಲ್ಲಿ ಗುಲ್ಬರ್ಗಾಗೆ ಎಳನೀರು ಕೊಂಡೊಯ್ಯುತ್ತಿದ್ದ ಎಂದು ಹೇಳಲಾಗಿದೆ.

ಅಪಘಾತ ನಡೆಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ ಚಾಲಕನನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಜಮಾಯಿಸಿದ ಸಾರ್ವಜನಿಕರು ಗಾಯಾಳುಗಳನ್ನು ಮಂಡ್ಯದ ವಿಮ್ಸ್ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದರು.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಂ.ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಎಸ್ಪಿ ಡಿ.ಶಿವಪ್ರಕಾಶ್, ಎಎಸ್‍ಪಿ ಲಾವಣ್ಯ, ಡಿವೈಎಸ್‍ಪಿ ಗಂಗಾಧರಸ್ವಾಮಿ, ತಹಸೀಲ್ದಾರ್ ನಾಗೇಶ್ ಭೇಟಿ ನೀಡಿದ್ದರು.

ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಣೆ

ಮಂಡ್ಯ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಅಪ ಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರ ಜೊತೆ ಮಾತ ನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆದೇಶದಂತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುವುದರ ಜೊತೆಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

Translate »