ಹೊಳೆನರಸೀಪುರ: ‘ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ನೈತಿಕ, ಸಾಮಾಜಿಕ, ಶೈಕ್ಷಣಿಕ ಮೌಲ್ಯ ಬೆಳೆಸಬೇಕು’ ಎಂದು ತಹಶೀಲ್ದಾರ್ ವೈ.ಎಂ.ರೇಣು ಕುಮಾರ್ ಸಲಹೆ ನೀಡಿದರು.
ಪಟ್ಟಣದ ಚೆನ್ನಾಂಬಿಕಾ ಚಿತ್ರಮಂದಿರ ದಲ್ಲಿ ನಡೆದ ‘ಅರಿವು’ ಎಂಬ ಮಕ್ಕಳ ಚಲನ ಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಅರಿವು ಮೂಡಿಸಲು ಈ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಾಗಿ ವಿಷಯಾಧಾರಿತ ಶಿಕ್ಷಣದ ಜೊತೆಗೆ ಮನೋರಂಜನೆಯ ಮೂಲಕ ಶಿಕ್ಷಣ ನೀಡಬೇಕು. ಇದಕ್ಕೆ ಪೂರಕವಾಗಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದುವುದರ ಜೊತೆಗೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳ ಕಲಿಕೆಯ ಮೇಲೆ ಪೋಷಕರು ನಿಗಾವಹಿಸ ಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಮಾತನಾಡಿ, ಮನೋರಂಜನೆಯ ಮೂಲಕ ಮೌಲ್ಯಗಳನ್ನು ಮತ್ತು ತತ್ವ ಆದರ್ಶಗಳನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಪಾಠದ ಜೊತೆಗೆ, ಕ್ರೀಡೆ ಸಾಹಿತ್ಯ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಏನನ್ನು ಬೇಕಾ ದರು ಸಾಧಿಸಬಹುದು ಎನ್ನುವುದನ್ನು ಚಿತ್ರ ದಲ್ಲಿ ತೋರಿಸಲಾಗಿದೆ. ಮಕ್ಕಳ ಭವಿಷ್ಯ ದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರಿ ಉದ್ಯೋಗ ಪಡೆಯುವ ಸಂದರ್ಭ ದಲ್ಲಿ ಎನ್‍ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಕ್ರೀಡೆಯಲ್ಲಿ ಸಾಹಸ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ ನೀಡಲಾಗಿದೆ ಎಂದರು. ದೈಹಿಕ ಶಿಕ್ಷಣದ ನಿರ್ದೇಶಕ ನಾಗರಾಜ ಮಾತನಾಡಿದರು.