ಮೈಸೂರು, ಆ.28(ಆರ್‍ಕೆಬಿ)- ಶಿಕ್ಷಣದ ನಂತರ ಮುಂದೇನು? ಎಂಬ `ಗುರಿ’ ವಿದ್ಯಾರ್ಥಿಗಳಿಗೆ ಇರುವು ದಿಲ್ಲ. ಅಂಥ ಗುರಿ ತಲುಪಿಸಲು ಪ್ರೇರೇಪಿಸುವ ಕೆಲಸ ನಮ್ಮದಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲ ಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಮೈಸೂರಿನ ಮಾನಸ ಗಂಗೋತ್ರಿ ಶೈಕ್ಷಣಿಕ ಬಹು ಮಾಧ್ಯಮ ಸಂಶೋಧನಾ ಕೇಂದ್ರದ (ಇಎಂಎಂಆರ್‍ಸಿ) ಸಭಾಂಗಣದಲ್ಲಿ ಬುಧವಾರ ಮೈಸೂರು ವಿಶ್ವ ವಿದ್ಯಾ ನಿಲಯ ತತ್ವಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾ ನಂದ ಪೀಠ ಆಯೋಜಿಸಿದ್ದ `ಭಾರತೀಯ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ಪ್ರಾಚ್ಯ ಮತ್ತು ಪಾಶ್ಚಾತ್ಯ ಶಿಷ್ಯರ ಕೊಡುಗೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಸೂರು ವಿಶ್ವವಿದ್ಯಾನಿಲಯದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‍ಗಳ ಮುಕ್ತಾಯದ ಬಳಿಕ ಮುಂದೇನು ಮಾಡಬೇಕು ಎಂಬ ಬಗ್ಗೆ ಯಾವುದೇ ಗುರಿ ಹೊಂದಿರುವುದಿಲ್ಲ. ಅಂಥ ವಿದ್ಯಾರ್ಥಿ ಗಳು `ಗುರಿ’ ತಲುಪಬೇಕಾದರೆ ಉಪನ್ಯಾಸಕರಾದ ನಾವು ಅವರನ್ನು ಪ್ರೇರೇಪಿಸಬೇಕಾಗಿದೆ. ಅವರಿಗೆ ಗುರಿ ತಲುಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸಹ ತಮ್ಮ ಮುಂದಿನ ಗುರಿಯ ಬಗ್ಗೆ ಸಮಗ್ರವಾಗಿ ಚಿಂತಿಸಬೇಕು. ಗುರಿ ತಲುಪಲು ಉಪನ್ಯಾಸಕರ ನೆರವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಾತ್ಮಿಕ ತಳಹದಿ ಇಲ್ಲದೆ ಯಾವ ಶಿಕ್ಷಣವೂ ಪೂರ್ಣವಾಗದು. ಈ ನಿಟ್ಟಿನಲ್ಲಿ ಮೈಸೂರು ವಿವಿಯಲ್ಲಿರುವ 20 ಪೀಠಗಳ ಪೈಕಿ ಸ್ವಾಮಿ ವಿವೇಕಾ ನಂದ ಪೀಠ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿ ದಾನಂದಜೀ, ಸತ್ಯ ಮತ್ತು ಅಧ್ಯಾತ್ಮಿಕ ತಳಹದಿಯ ಮೇಲೆ ಶಿಕ್ಷಣ ಇರಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದ ಸ್ವಾಮಿ ವಿವೇಕಾನಂದರು ಬೆಳಕಿನ ಮನೆ, ಮಾನವೀ ಯತೆಯ ಕಣಜ. ಅವರ ದೈವಿಕ ಶಕ್ತಿ ಮತ್ತು ಮಾನವೀ ಯತೆಯನ್ನು ಎಲ್ಲರೂ ಅರಿತುಕೊಳ್ಳಬೇಕು. ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಪೀಠದ ಅಧ್ಯಕ್ಷ ಡಾ.ಎಸ್.ವೆಂಕಟೇಶ್, ಸಂಯೋಜಕ ಡಾ.ಎಂ.ಡ್ಯಾನಯಲ್, ಸಂದರ್ಶಕ ಪ್ರಾಧ್ಯಾಪಕ ಪ್ರೊ. ವಿ.ಎನ್.ಶೇಷಗಿರಿರಾವ್ ಉಪಸ್ಥಿತರಿದ್ದರು.