ಮೈಸೂರು: ಚಾಮುಂಡೇಶ್ವರಿಯಲ್ಲಿ 5 ಬಾರಿ ಗೆಲ್ಲಿಸಿ ಆಶೀರ್ವಾದ ಮಾಡಿರುವ ಕ್ಷೇತ್ರದ ಜನತೆ ಈ ಬಾರಿಯೂ ನನ್ನನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇ ಶ್ವರಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಪ್ರಚಾರ ಕೈಗೊಂಡ ಅವರು ಬೀರಿಹುಂಡಿ, ಜಟ್ಟಿಹುಂಡಿ, ಕುಮಾರಬೀಡು ಸೇರಿದಂತೆ ವಿವಿಧ ಕಡೆಗಳಲ್ಲಿ ರೋಡ್ ಶೋ ನಡೆಸಿ, ಜನರನ್ನುದ್ದೇಶಿಸಿ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ರಾಜ್ಯದ ಜನತೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ತೀರ್ಮಾ ನಿಸಿದ್ದಾರೆ. ಬೇರೆ ಪಕ್ಷಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಅವರ ಸರ್ಕಾರ ಬರುವುದಿಲ್ಲ, ಅವರು ಮುಖ್ಯಮಂತ್ರಿಯೂ ಆಗುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.
ಕ್ಷೇತ್ರದ ಜನತೆ ಯಾರ ಮಾತನ್ನೂ ಕೇಳಬೇಡಿ. ಬೇರೆ ಪಕ್ಷದ ಪರವಾಗಿ ಓಟು ಕೇಳಿದವರಿಗೆ ನಾವು ಕಾಂಗ್ರೆಸ್ಗೇ ಓಟು ಹಾಕೋದು, ಬೇರೆ ಯಾರಿಗೂ ಹಾಕುವು ದಿಲ್ಲ ಎಂದು ಹೇಳುವಂತೆ ತಿಳಿಸಿದರು.
ವಿವಿಧ ಗ್ರಾಮಗಳಿಗೆ ರೋಡ್ ಶೋನಲ್ಲಿ ತೆರಳಿದ ಸಿದ್ದರಾಮಯ್ಯ ತಮ್ಮ ಸರ್ಕಾರ ಗ್ರಾಮಗಳಿಗೆ ಮಾಡಿದ ಅಭಿವೃದ್ಧಿ ಕುರಿತು ವಿವರಣೆ ನೀಡುತ್ತಿದ್ದರು. ಆಯಾ ಗ್ರಾಮ ಗಳ ಅಭಿವೃದ್ಧಿ ತಮ್ಮ ಸರ್ಕಾರ ನೀಡಿದ ಅನುದಾನಗಳ ಬಗ್ಗೆ ತಿಳಿಸುತ್ತಿದ್ದರು. ಜಟ್ಟಿ ಹುಂಡಿ ಗ್ರಾಮದ ಅಭಿವೃದ್ಧಿಗೆ 1.2 ಕೋಟಿ ರೂ. ನೀಡಿದ್ದೇವೆ. ಚುನಾವಣೆ ಬಳಿಕ ಕೆಲಸ ಪ್ರಾರಂಭವಾಗಲಿದೆ ಎಂದರು.
ಕುಮಾರಬೀಡು ಗ್ರಾಮಕ್ಕೆ ಟಿಎಸ್ಪಿ ಯೋಜನೆಯಡಿ 8 ಲಕ್ಷ ರೂ. ನೀಡಿದ್ದು, ಊರಿನೊಳಗೆ ಕಾಂಕ್ರೀಟ್ ರಸ್ತೆ ನಿರ್ಮಾ ಣಕ್ಕೆ 35 ಲಕ್ಷ ರೂ. ನೀಡಿದ್ದೇವೆ. ನಾಯಕ ಸಮಾಜದ ಪರಿವಾರ, ತಳವಾರ ಪರ್ಯಾಯ ಪದಗಳ ಬಗ್ಗೆ ಅಧ್ಯಯನ ಮಾಡಿ ವೈಜ್ಞಾನಿಕ ವರದಿ ತರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದು ನಾವೇ ಎಂದು ಹೇಳಿದರು.
ಬೀರಿಹುಂಡಿಯಲ್ಲಿ ಕಾಂಕ್ರೀಟ್ ರಸ್ತೆಗೆ 1.5 ಕೋಟಿ ರೂ. ಕೊಟ್ಟಿದ್ದೇನೆ. ಕಾವೇರಿ ನೀರು ಕೊಟ್ಟಿದ್ಧೇನೆ. ಬೇರೆ ಪಕ್ಷದವರು ಗ್ರಾಮಕ್ಕೆ ಏನೇನೂ ಮಾಡಿಲ್ಲ. ಹಾಸ್ಟೆಲ್, ಕುಡಿಯುವ ನೀರು, ರಸ್ತೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಈ ಬಾರಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ಗೆ ಮತ ಚಲಾಯಿಸಿ ಆಶೀರ್ವದಿಸುವಂತೆ ಮನವಿ ಮಾಡಿದರು.
ಬಿರು ಬಿಸಿಲಲ್ಲಿ ರೋಡ್ ಶೋ: ಬುಧ ವಾರ ಕ್ಷೇತ್ರದ ಜಟ್ಟಿಹುಂಡಿ, ಬೀರಿಹುಂಡಿ, ಗೋಹಳ್ಳಿ, ಕುಮಾರಬೀಡು, ಶೆಟ್ಟಿನಾಯಕನ ಹಳ್ಳಿ ಸೇರಿದಂತೆ 15 ಗ್ರಾಮಗಳಲ್ಲಿ ಬಿರು ಬಿಸಿಲಿನ ನಡುವೆ ರೋಡ್ ಶೋ ನಡೆಸಿ ಬಿರುಸಿನ ಪ್ರಚಾರ ಕೈಗೊಂಡರು.
ಬಿಳಿಯ ಟೋಪಿ ಧರಿಸಿದ್ದ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ, ಮಾಜಿ ಶಾಸಕ ಸತ್ಯನಾರಾಯಣ, ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಇನ್ನಿತರರು ಸಾಥ್ ನೀಡಿ ಮತಯಾಚಿಸಿ ದರು. ಗ್ರಾಮಗಳಿಗೆ ಹೋಗುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಆರತಿ ಎತ್ತಿ ಸಿದ್ದರಾಮಯ್ಯರನ್ನು ಬರಮಾಡಿಕೊಂಡರು.
ರೋಡ್ ಶೋಗೆ ಜಾನಪದ ಸ್ಪರ್ಶ: ಬೀರಿಹುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ರೋಡ್ ಶೋಗೆ ಜಾನಪದ ಸ್ಪರ್ಶ ನೀಡ ಲಾಯಿತು. ಮೆರವಣಿಗೆಯಲ್ಲಿ ಮಹಿಳೆ ಯರು ಆರತಿ ಎತ್ತಿದರು. ಮಹಿಳೆಯ ರಿಂದ ಪೂರ್ಣಕುಂಭ ಸ್ವಾಗತ, ಛತ್ರಿ, ಚಾಮರದೊಂದಿಗೆ ನಾದಸ್ವರದೊಂದಿಗೆ ಸಿದ್ದರಾಮಯ್ಯರನ್ನು ಬರಮಾಡಿಕೊಂಡರು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಕಂಡು ಸಿದ್ದರಾಮಯ್ಯ, ತಮ್ಮ ಭಾಷಣದ ವೇಳೆಗೆ ಗ್ರಾಮದ ಒಬ್ಬೊಬ್ಬರೇ ಮುಖಂಡರ ಹೆಸರನ್ನು ಹೇಳುತ್ತಾ, ಗ್ರಾಮದ ಜನತೆ ಈ ಬಾರಿ ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಜಟ್ಟಿಹುಂಡಿಯಲ್ಲಿ ಸಿದ್ದರಾಮಯ್ಯರಿಗೆ ಆರತಿ ಎತ್ತಿ, ಮೈಸೂರು ಪೇಟ, ಶಾಲು ಹೊದಿಸಿ ಗೌರವಿಸಿ ಗ್ರಾಮಕ್ಕೆ ಸ್ವಾಗತಿಸಿದರು. ಗೋಹಳ್ಳಿ, ಕುಮಾರಬೀಡುಗಳಲ್ಲಿಯೂ ಮಾತನಾಡಿ ಮತ ಯಾಚಿಸಿದರು.
ಸಿಎಂ ರೋಡ್ ಶೋ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಕೂರ್ಗಳ್ಳಿ ಮಹದೇವು, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಸಿ.ಜೆ.ವಿಜಯಕುಮಾರ್, ರಾಜ್ಯ ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿಪಂ. ಸದಸ್ಯ ರಾದ ರಾಕೇಶ್ ಪಾಪಣ್ಣ, ಅರುಣ್ಕುಮಾರ್, ಎಪಿಎಂಸಿ ಸದಸ್ಯರಾದ ಕೆ. ಪ್ರಭುಸ್ವಾಮಿ, ಉದ್ಬೂರು ಕೃಷ್ಣ, ತಾಪಂ. ಮಾಜಿ ಸದಸ್ಯರಾದ ಕೆಂಚಪ್ಪ, ಜಿ.ಕೆ. ಬಸವಣ್ಣ, ಮಂಜುಳಾ ಮಂಜುನಾಥ್, ಕೆಪಿಸಿಸಿ ಕಾರ್ಯದರ್ಶಿ ಡಾ|.ನಾಗಲಕ್ಷ್ಮಿ, ವರುಣಾ ಮಹೇಶ್, ಗ್ರಾಪಂ ಅಧ್ಯಕ್ಷ ಮಾಲೇಗೌಡ, ಬಸವರಾಜು, ಮುಖಂಡರಾದ ಕೃಷ್ಣಮಾದೇಗೌಡ, ಸಿದ್ದೇ ಗೌಡ, ಕೋಟೆಹುಂಡಿ ಮಹಾದೇವ್, ಬೋಗಾದಿ ನಾಗರಾಜ್, ಜಟ್ಟಿಹುಂಡಿ ರಮೇಶ್, ಹಿನಕಲ್ ಪ್ರಕಾಶ್, ಮರಟಿ ಕ್ಯಾತನಹಳ್ಳಿ ಜಯ ರಾಮೇಗೌಡ, ನುಗ್ಗಳ್ಳಿ ಚಿಕ್ಕಣ್ಣ, ಮಾದಳ್ಳಿ ಪ್ರಸಾದ್, ಸ್ಲಂಬೋರ್ಡ್ ನಿರ್ದೇಶಕ ಜಯ ರಾಮೇಗೌಡ, ದಿನೇಶ್ ಕೊಪ್ಪಲ್, ನಜûರ್ಬಾದ್ ನಟರಾಜು, ನಾಡನ ಹಳ್ಳಿ ರವಿ ಇನ್ನಿತರರು ಭಾಗವಹಿಸಿದ್ದರು.