ಮೈಸೂರು: ಮುಕ್ತ ವಿವಿ ವಿದ್ಯಾರ್ಥಿಗಳಿಗೆ ವಿವಿ ಮಾನ್ಯತೆ ರದ್ದತಿಯಿಂದ ಆಗಿರುವ ಗಂಭೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ವತಂತ್ರ ಸಂಸ್ಥೆಯಿಂದ `ಅರ್ಹತಾ ಪರೀಕ್ಷೆ’ ನಡೆಸಿ ಅವರಿಗೆ ಮಾನ್ಯತೆ ದೊರಕುವಂತೆ ಮಾಡುವ ಸಂಬಂಧ ವಿಶ್ವವಿದ್ಯಾ ನಿಲಯ ಧನಸಹಾಯ ಆಯೋಗದೊಂದಿಗೆ ವ್ಯವಹರಿಸಲು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಸಿದ್ಧವಿದೆ ಎಂದು ವೇದಿಕೆ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದರಿಂದ ವಿವಿಗೆ ಈ ಸಮಸ್ಯೆ ಬಂದೊದಗಿದೆ ಎಂಬ ವಿಷಯ ಕುರಿತು ಚರ್ಚೆಗಿಂತಲೂ ತೊಂದರೆಗೆ ಸಿಲುಕಿರುವ ಸುಮಾರು 3 ಲಕ್ಷ ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈಗ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.
ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಇನ್ನಿತರೆ ವಿದ್ಯಾಭ್ಯಾಸ ಮಾಡಿ ಬಂದವರಿಗೆ ನಮ್ಮ ರಾಷ್ಟ್ರದಲ್ಲಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ `ಅರ್ಹತಾ ಪರೀಕ್ಷೆ’ ಮಾದರಿಯಲ್ಲಿ ಪರೀಕ್ಷೆಯನ್ನು ಈ ವಿದ್ಯಾರ್ಥಿಗಳಿಗೂ ನಡೆಸಿ, ಅವರಿಗೆ ಮಾನ್ಯತೆ ದೊರಕುವಂತೆ ಮಾಡಲು ಮುಕ್ತ ವಿವಿ, ರಾಜ್ಯ ಸರ್ಕಾರ ಮುಂದಾಗಬೇಕಿದೆ. ಇದಕ್ಕೆ ಅನುಮತಿ ನೀಡುವ ಸಂಬಂಧ ಯುಜಿಸಿಯೊಡನೆ ವೇದಿಕೆ ಮಾತುಕತೆ ನಡೆಸಲು ಸಿದ್ಧವಿದೆ ಎಂದರು. ವೇದಿಕೆ ಕಾರ್ಯನಿರ್ವಾಹಕ ಸಮಿತಿ ಸದಸ್ಯರೂ ಆದ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ. ರಾಮೇಗೌಡ ಮಾತನಾಡಿ, ರಾಜ್ಯ ಸರ್ಕಾರವು, ಮುಕ್ತ ವಿವಿಯ ರಾಜ್ಯದ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಈ ರಾಜ್ಯದಲ್ಲಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಮಾನ್ಯತೆಯನ್ನು ನೀಡಲು ಆದೇಶ ಹೊರಡಿಸಿದೆ. ಆದರೆ ಅದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ಅದು (ಶಿಫಾರಸು) ಜಾರಿಯಾಗಲು ಸಾಧ್ಯವಾಗಿಲ್ಲ ಎಂದು ವಿವರ ನೀಡಿದರು. ಕುವೆಂಪು ವಿವಿ ವಿಶ್ರಾಂತ ಕುಲಪತಿಯೂ ಆದ ವೇದಿಕೆ ಉಪಾಧ್ಯಕ್ಷ ಪ್ರೊ. ವೆಂಕಟ ರಾಮಯ್ಯ ಮಾತನಾಡಿ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಮುಕ್ತ ವಿವಿಗೆ 2018-19ರ ಅವಧಿಗೆ ಯುಜಿಸಿ ಅನುಮತಿ ಸಿಗುವುದು ಕಷ್ಟವಾಗಿದೆ. ಏಕೆಂದರೆ ಯುಜಿಸಿ ತಿದ್ದುಪಡಿ, ನೂತನ ನಿಯಮ ಗಳಂತೆ ಸಲ್ಲಿಸಬೇಕಾದ ದಿನಾಂಕದೊಳಗೆ ಮುಕ್ತ ವಿವಿ ಅರ್ಜಿ ಸಲ್ಲಿಸಿಲ್ಲದೇ ಇರುವುದು ತೊಡಕಾಗಿದೆ. ಆದ್ದರಿಂದ 2019-20ರ ಅವಧಿಗೆ ಮಾನ್ಯತೆ ಸಿಗಬಹುದು ಎಂದು ತಿಳಿಸಿದರು.