ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನ ಸಭೆ ವಿಫಲ
ಹಾಸನ

ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನ ಸಭೆ ವಿಫಲ

July 18, 2018

ಹಾಸನ: ವಿಮಾನ ನಿಲ್ದಾಣ ನಿರ್ಮಾಣ ಹಿನ್ನೆಲೆ ಭೂ-ಸ್ವಾಧೀನಕ್ಕಾಗಿ ಕಳೆದ ಎರಡು ದಿನಗಳಿಂದ ರೈತರೊಂದಿಗೆ ನಡೆಯುತ್ತಿರುದ ಸಭೆ ವಿಫಲವಾಗಿ ಜಿಲ್ಲಾಡಳಿತ ನಿಗದಿ ಪಡಿಸಿದ್ದ ಪರಿಹಾರ ದರ ಒಪ್ಪದೆ ರೈತರು ಅಸಮಾಧಾನದಿಂದ ಹೊರ ನಡೆದ ಘಟನೆ ಮಂಗಳವಾರ ನಡೆಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಎರಡನೇ ದಿನ ಕರೆದಿದ್ದ ಪರಿಹಾರ ದರ ನಿಗದಿ ಕುರಿತ ಸಭೆಯಲ್ಲಿ ಅಧಿಕಾರಿಗಳು ಸಾಕಷ್ಟು ಸಮಯ ರೈತರೊಂದಿಗೆ ಚರ್ಚಿಸಿದರು. ಆದರೂ ಪಟ್ಟುಬಿಡದ ರೈತರು ಎಕರೆಗೆ 2 ಕೋಟಿ ರೂ. ಪರಿಹಾರ ಸೇರಿದಂತೆ ಇತರೆ ಹಕ್ಕೊತ್ತಾಯ ಮುಂದಿಟ್ಟರು. ಇದಕ್ಕೆ ಅಧಿ ಕಾರಿಗಳು ಸಮ್ಮತಿಸದೆ ಅಸಮಾಧಾನಗೊಂಡ ರೈತರು ಸಭೆಯಿಂದ ಹೊರನಡೆದರು.

ಸೋಮವಾರ ಈ ಕುರಿತು ನಡೆದ ಸಭೆ ಯಲ್ಲೂ ಅಧಿಕಾರಿಗಳ ಪರಿಹಾರ ದರಕ್ಕೆ ಸಮ್ಮತಿಸದ ಕಾರಣ ಸಭೆ ಮುಂದೂಡಲಾಗಿತ್ತು. ಮತ್ತೆ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭ ವಾದ ಸಭೆಯಲ್ಲಿ ಅಧಿಕಾರಿಗಳು, ತಾಲೂಕಿನ ಬೂವನಹಳ್ಳಿ ಮತ್ತು ಸಂಕೇನಹಳ್ಳಿಗೆ 32 ಲಕ್ಷ ನಿಗದಿ ಮಾಡಿದರೆ, ದ್ಯಾವಲಾಪುರ, ಲಕ್ಷ್ಮೀಸಾಗರ, ತೆಂಡೆಹಳ್ಳಿ, ಜಿ.ಮೈಲನಹಳ್ಳಿ ಗ್ರಾಮದ ಜಮೀನುಗಳಿಗೆ ಎಕರೆಗೆ 28 ಲಕ್ಷ ರೂ. ದರ ನಿಗದಿ ಮಾಡಿದರು. ಮೊದಲ ಸಭೆಗಿಂತ 4 ಲಕ್ಷ ರೂ. ಹೆಚ್ಚು ಮಾಡಿದರೂ ರೈತರು ಪ್ರತಿ ಎಕರೆಗೆ 2 ಕೋಟಿ ರೂ. ಗಳನ್ನು ನೀಡುವುದು, ಭೂಮಿ ಕಳೆದು ಕೊಂಡ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ವಿಮಾನಯಾನ ಇಲಾಖೆಯಲ್ಲಿ ಅರ್ಹತೆ ಗನುಗುಣವಾಗಿ ಉದ್ಯೋಗ ಹಾಗೂ ಈ ಭಾಗಗಳಲ್ಲಿ 30 ಅಡಿ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆ ಮಂಡಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪದ ಕಾರಣ ಭಾಗವಹಿಸಿದ್ದ ರೈತರು ಅಂಬೇಡ್ಕರ್ ಭವನದಿಂದ ಒಬ್ಬೊಬ್ಬರಾಗಿ ಹೊರ ಬರುವ ಮೂಲಕ ಸಭೆ ವಿಫಲವಾಯಿತು.

ಇದಕ್ಕೂ ಮುನ್ನ ಕೆಐಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಅರುಣ್‍ಕುಮಾರ್ ರೈತರನ್ನು ಉದ್ದೇಶಿಸಿ ಮಾತನಾಡಿ, 1991ರಲ್ಲಿ 466 ಎಕರೆ ಭೂಮಿಯನ್ನು ಎಕರೆಗೆ ಲಕ್ಷ ರೂ.ನಂತೆ ರೈತರಿಗೆ ನೀಡಿ ಭೂಮಿ ಸ್ವಾಧೀನ ಮಾಡಿ ಕೊಳ್ಳಲಾಗಿತ್ತು. ನಂತರ 2007ರಲ್ಲಿ ಐಐಟಿ ಹೆಸರಿನಲ್ಲಿ 1,057 ಎಕರೆ ಭೂಮಿಯನ್ನು ಪ್ರತಿ ಎಕರೆಗೆ 5 ಲಕ್ಷ ರೂ.ಗಳಂತೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ನಂತರದಲ್ಲಿ ಇಂದು ಭೂ-ಸ್ವಾಧೀನ ಕಾಯ್ದೆ ಪ್ರಕಾರ ಹೆಚ್ಚಿನ ದರ ನೀಡಿ ಭೂಮಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದೇವೆ.

ಬೂವನಹಳ್ಳಿಗೆ ಮಾತ್ರ ಪ್ರತಿ ಎಕರೆಗೆ 28 ಲಕ್ಷ ರೂ., ಉಳಿದಂತೆ ಇತರೆ ಹಳ್ಳಿಗಳಿಗೆ 25 ಲಕ್ಷ ರೂ.ಗಳನ್ನು ಪರಿಹಾರ ನೀಡಲಾಗುವುದು ಎಂದು ಮೊದಲ ಸಭೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಸಮ್ಮತಿಸದ ಕಾರಣ ಇಂದಿನ ಸಭೆಯಲ್ಲಿ ಎಕರೆಗೆ ತಲಾ 3ರಿಂದ 4 ಲಕ್ಷ ರೂ.ವನ್ನು ಹೆಚ್ಚಿಗೆ ಕೊಡಲು ತೀರ್ಮಾನಿಸ ಲಾಗಿದೆ ಎಂದು ರೈತರಿಗೆ ಮಾಹಿತಿ ನೀಡಿದರು.

ತಾಲೂಕಿನ ಕೋರವಂಗಲ ಕಾವಲು ನಿವಾಸಿ ವಕೀಲ ರಂಗಸ್ವಾಮಿ ರೈತರ ಪರವಾಗಿ ಮಾತನಾಡುತ್ತಾ, ವಿಮಾನ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಭೂಮಿ ಯಾಗಿ 189 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ 2017ರ ಏ.11ರಂದು ರೈತರಿಗೆ ನೋಟೀಸ್ ನೀಡಲಾಗಿದ್ದು, 2017ರ ಅನುಪಾತದಲ್ಲೇ ದರ ನಿಗದಿ ಮಾಡ ಬೇಕು ಎಂದು ಪಟ್ಟು ಹಿಡಿದರು. ಈ ಭೂಮಿಗೆ 2006ರ ವರ್ಷದ ಹಿಂದಿನ ದರ ನಿಗದಿ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರಲ್ಲದೆ, ಇಂದಿನ ಮಾರುಕಟ್ಟೆ ಬೆಲೆ ನೀಡಿದರೆ ಮಾತ್ರ ರೈತರು ತಮ್ಮ ಭೂಮಿ ನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು.

Translate »