ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ
ಹಾಸನ

ಸಚಿವ ಹೆಚ್.ಡಿ.ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಎತ್ತಂಗಡಿ

July 18, 2018

ಚನ್ನರಾಯಪಟ್ಟಣ: ಚುನಾವಣಾ ಸಮಯದಲ್ಲಿ ಸಚಿವ ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದ ಹಿನ್ನೆಲೆ ತಮ್ಮ ಪ್ರಭಾವ ಬಳಸಿ ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಜಿಪಂ ಸದಸ್ಯ ಶ್ರೇಯಸ್ ಎಂ.ಪಾಟೀಲ್ ಆರೋಪಿಸಿದ್ದಾರೆ.

ಪಟ್ಟಣದ ಗ್ರಾಮೀಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್‍ರನ್ನು ನಿನ್ನೆ ಒಒಡಿ ಮೂಲಕ ಎತ್ತಂಗಡಿ ಮಾಡಿ, ಕೋಲಾರದ ಜಿಲ್ಲಾ ಸ್ಪೆಷಲ್ ಬ್ರಾಂಚ್‍ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಎಂ.ಪಾಟೀಲ್, ಚುನಾವಣಾ ಸಮಯದಲ್ಲಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಕೇಸ್ ದಾಖಲಿಸಿದ್ದ ಇನ್ಸ್‍ಪೆಕ್ಟರ್ ಹರೀಶ್ ಬಾಬು ಅವರಿಗೆ ಠಾಣೆಗೆ ಬಾರದಂತೆ ಮೌಖಿಕ ಆದೇಶ ನೀಡಿದ್ದು, ಸಚಿವರ ಹೆಚ್.ಡಿ. ರೇವಣ್ಣ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಅಧಿಕಾರಿಯನ್ನು ವರ್ಗಾಯಿಸಿದ್ದಾರೆ. ದಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಸಚಿವರು ಯಶಸ್ವಿ ಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ರೇವಣ್ಣರ ಒತ್ತಡಕ್ಕೆ ಮಣಿದ ಹಾಸನ ಎಸ್ಪಿ, ಲಿಖಿತ ಆದೇಶವಿಲ್ಲದೆ ಫೋನ್ ಮೂಲಕವೇ ಠಾಣೆಗೆ ಬಾರದಂತೆ ಇನ್ಸ್‍ಪೆಕ್ಟರ್ ಹರೀಶ್ ಬಾಬುಗೆ ಆದೇಶಿಸಿದ್ದು, ಇನ್ಸ್‍ಪೆಕ್ಟರ್ ಹರೀಶ್ ಬಾಬು 20 ದಿನಗಳಿಂದ ಠಾಣೆಗೆ ಹಾಜರಾಗಿಲ್ಲ ಎಂದರು. ಮಗನ ಮೇಲೆ ಕೇಸು ಹಾಕಿದ್ದಕ್ಕೆ ಪ್ರತೀಕಾರಕ್ಕಿಳಿದ ಸಚಿವ ರೇವಣ್ಣ ಅವರು, ಎತ್ತಂಗಡಿ ಆಗುವವರೆಗೂ ಇನ್ಸ್‍ಪೆಕ್ಟರ್ ಹರೀಶ್ ಬಾಬು ಚನ್ನರಾಯಪಟ್ಟಣಕ್ಕೆ ಬರದಂತೆ ಸೂಚಿಸಲು ಹಾಸನ ಎಸ್ಪಿ ರಾಹುಲ್ ಕುಮಾರ್ ಮೇಲೆ ಒತ್ತಡ ಹೇರಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣದ ಹಿನ್ನೆಲೆ: 2018ರ ಏ.29ರಂದು ಚನ್ನರಾಯಪಟ್ಟಣದ ಎ.ಕಾಳೇನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜೆಡಿಎಸ್‍ನವರು ಜಿಪಂ ಸದಸ್ಯ ಶ್ರೇಯಸ್ ಎಂ. ಪಾಟೀಲ್ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಈ ಸಂಬಂಧ ಸೂರಜ್ ರೇವಣ್ಣ, ಬೆಂಬಲಿಗರ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಶ್ರೇಯಸ್ ಎಂ.ಪಾಟೀಲ್ ದೂರು ದಾಖಲಿಸಿದ್ದರು. ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಹರೀಶ್ ಬಾಬು ಮೇಲಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿ ಸೂರಜ್ ರೇವಣ್ಣರನ್ನು ಎ-1 ಆರೋಪಿ ಎಂದು ಉಲ್ಲೇಖಿಸಿ ಪ್ರಕರಣ ದಾಖಲಿಸಿ ಕೊಂಡಿದ್ದರು. ಮಗನ ಮೇಲೆ ಕೇಸು ಹಾಕಿದ್ದರಿಂದ ಅಸಮಾಧಾನಗೊಂಡಿದ್ದ ಸಚಿವ ರೇವಣ್ಣ, 8 ತಿಂಗಳ ಹಿಂದೆ ಚನ್ನರಾಯಪಟ್ಟಣಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಬಂದಿದ್ದ ಹರೀಶ್‍ರನ್ನು ತಮ್ಮ ಪ್ರಭಾವ ಬಳಸಿ ನಿನ್ನೆ ಒಒಡಿ ಮೂಲಕ ಎತ್ತಂಗಡಿ ಮಾಡಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಹರೀಶ್‍ರನ್ನು ಕೋಲಾರದ ಜಿಲ್ಲಾಸ್ಪೆಷಲ್ ಬ್ರಾಂಚ್‍ಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

Translate »