ಬೆಂಗಳೂರು, ಜು. 29- ಸ್ಪೀಕರ್ ರಮೇಶ್‍ಕುಮಾರ್ ಅವರು ಅನರ್ಹತೆಗೊಳಿ ಸಿದ ಆದೇಶವನ್ನು ಪ್ರಶ್ನಿಸಿ ಮೂವರು ರೆಬೆಲ್ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ರೆಬೆಲ್ ಶಾಸಕ ರಾದ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಆರ್. ಶಂಕರ್ ಅವರು ಸ್ಪೀಕರ್ ಆದೇಶ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸಂಬಂಧ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮಂಗಳವಾರ ಇಲ್ಲವೇ ಬುಧವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಮೂವರು ಶಾಸಕರನ್ನು ಸ್ಪೀಕರ್ ರಮೇಶ್‍ಕುಮಾರ್ ಅವರು ಜುಲೈ 23ರಂದು ಅನರ್ಹಗೊಳಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ರೆಬೆಲ್ ಶಾಸಕರು, ಸುಮಾರು ದಿನಗಳಿಂದ ಹಾಗೇ ಉಳಿದಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಇತ್ಯರ್ಥ ಮಾಡಿದ್ದಾರೆ. ಸ್ಪೀಕರ್ ರಮೇಶ್‍ಕುಮಾರ್ ಅನರ್ಹತೆ ಮಾಡಲು ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ದ್ವೇಷದಿಂದ ಹೀಗೆ ಮಾಡಿದ್ದು ಸರಿಯಲ್ಲ. ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.