ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ
ಮೈಸೂರು

ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ

January 9, 2019

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆ ಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗ ಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಜೆಡಿಎಸ್‍ನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯು ತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತು ವಾರಿ ಕೆ.ಸಿ.ವೇಣುಗೋಪಾಲ್ ಇಂದಿಲ್ಲಿ ಪ್ರಕಟಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ರೊಂದಿಗೆ ಮಾತುಕತೆ ಮೂಲಕ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದರು.

ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಮಿತ್ರ ಪಕ್ಷಗಳೊಂದಿಗೆ ಕೈಜೋಡಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಮೈತ್ರಿ ಸರ್ಕಾರದಲ್ಲಿ ಕೆಲವು ಸಣ್ಣ-ಪುಟ್ಟ ಗೊಂದಲಗಳಿದ್ದು, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಮತ್ತು ನಮ್ಮ ಶಾಸಕರನ್ನೂ ಸರಿಪಡಿಸಿ ಕೊಳ್ಳುತ್ತೇವೆ. ಮೈತ್ರಿ ಪಕ್ಷಗಳ ನಡುವೆ ಪ್ರಮುಖ ಬಿಕ್ಕಟ್ಟು ಇಲ್ಲ, ಏಕಪಕ್ಷ ಆಡಳಿತ ಇರುವ ರಾಜ್ಯಗಳಲ್ಲೇ ಗೊಂದಲಗಳು ಸಹಜ, ಇಲ್ಲಿಯ ಗೊಂದಲಗಳ ಬಗ್ಗೆ ಚಿಂತೆ ಬೇಡ, ನಾವು ಪರಿಹರಿಸಿಕೊಳ್ಳುತ್ತೇವೆ. ಬಿಹಾರ ಮತ್ತು ಅಸ್ಸಾಂನಲ್ಲಿ ಮಿತ್ರ ಪಕ್ಷಗಳು ಹೊರಹೋಗಿವೆ, ಅದನ್ನು ಏಕೆ ಪ್ರಶ್ನಿಸುತ್ತಿಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನೆಯೂ ಬಿಜೆಪಿ ವಿರುದ್ಧ ಮಾತನಾಡುತ್ತಿದೆ. ಅಷ್ಟೇ ಅಲ್ಲ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಗಮನದಲ್ಲಿಟ್ಟುಕೊಂಡು, ಎನ್‍ಡಿಎನ ಪ್ರಧಾನಿ ಅಭ್ಯರ್ಥಿ ಬದಲಿಸುವುದಾಗಿ ಹೇಳುತ್ತಿದೆ, ಇವೆಲ್ಲಾ ಬಿಜೆಪಿ ವಿರುದ್ಧವಲ್ಲವೇ ಎಂದರು.

Translate »