ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ
ಮೈಸೂರು

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ

January 9, 2019

ನವದೆಹಲಿ, ಜ. 8- ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯಲ್ಲಿಂದು ಮಂಡನೆಯಾಗಿ, ಅನುಮೋದನೆ ಪಡೆದುಕೊಂಡಿತು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸಮಾಜವಾದಿ ಪಕ್ಷದ ತೀವ್ರ ಪ್ರತಿಭಟನೆಯ ನಡುವೆಯೂ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಮಸೂದೆ ಪರವಾಗಿ 323 ಸಂಸದರು ಮತ ಚಲಾಯಿಸಿದರೆ, 5 ಮಂದಿ ಮಾತ್ರ ವಿರುದ್ಧ ಮತ ಹಾಕಿದರು. ಆ ಮೂಲಕ ವಿಧೇಯಕ ಕೆಳಮನೆಯ ಅಂಗೀಕಾರ ಪಡೆಯಿತು. ಇನ್ನೇನಿದ್ದರೂ ಮೇಲ್ಮನೆ ರಾಜ್ಯ ಸಭೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆಯಬೇಕಿದೆ. ಬಳಿಕ ರಾಷ್ಟ್ರಪತಿಗಳ ಅಂಕಿತದೊಂದಿಗೆ ಜಾರಿಗೆ ಬರುತ್ತದೆ. ಆ ಮೂಲಕ ಮೇಲ್ವರ್ಗದ ಬಡ ಕುಟುಂಬಗಳ ಪ್ರತಿಭಾವಂತರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಪಡೆಯಲಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಕೇವಲ 100 ದಿನ ಬಾಕಿ ಇರುವಂತೆಯೇ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.

Translate »