ಮೈಸೂರಿಂದ ಹೆಚ್ಚುವರಿ ಆರು ವಿಮಾನ ಹಾರಾಟ
ಮೈಸೂರು

ಮೈಸೂರಿಂದ ಹೆಚ್ಚುವರಿ ಆರು ವಿಮಾನ ಹಾರಾಟ

January 9, 2019

ನವದೆಹಲಿ: ಕೇಂದ್ರ ಸರ್ಕಾರದ ಉಡಾನ್-3 ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಚ್ಚುವರಿ 6 ವಿಮಾನಗಳ ಹಾರಾಟಕ್ಕೆ ವಿಮಾನ ಯಾನ ಸಚಿವಾಲಯವು ಅನುಮೋದನೆ ನೀಡಿದೆ.

ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೆಚ್ಚಿನ ವಿಮಾನ ಯಾನ ಸೌಲಭ್ಯ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಹೆಚ್ಚುವರಿ ವಿಮಾನ ಹಾರಾಟಕ್ಕೆ ಅನುವು ಮಾಡಿ ಕೊಡಲಾಗಿದೆ. ಈಗಾಗಲೇ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರತಿ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದು, ಇದರ ಜೊತೆಗೆ ಮೈಸೂರು-ಬೆಳಗಾವಿ, ಮೈಸೂರು-ಹೈದರಾ ಬಾದ್, ಮೈಸೂರು-ಹೈದರಾಬಾದ್, ಮೈಸೂರು-ಗೋವಾ, ಮೈಸೂರು-ಕೊಚ್ಚಿನ್ ಇಂಟರ್ ನ್ಯಾಷ ನಲ್ ಏರ್‍ಪೋರ್ಟ್ ಹಾಗೂ ಮೈಸೂರು-ಬೆಂಗ ಳೂರು ವಿಮಾನ ಹಾರಾಟಕ್ಕೆ ಕೇಂದ್ರ ವಿಮಾನ ಯಾನ ಸಚಿವಾಲಯ ಅನುಮೋದನೆ ನೀಡಿದೆ.

ಇದಕ್ಕಾಗಿ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ಮೈಸೂರು ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಹೆಚ್ಚುವರಿ ವಿಮಾನ ಹಾರಾಟದಿಂದ ಮೈಸೂರಿನ ಸಾಮಾಜಿಕ, ಆರ್ಥಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ. ಹೊಸ ಹೊಸ ಕೈಗಾರಿಕೆಗಳು ಮೈಸೂರಿನಲ್ಲಿ ಸ್ಥಾಪನೆ ಯಾಗಲು ಇದು ನೆರವಾಗುತ್ತದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ-ಬೆಂಗಳೂರು ರೈಲು ಮೈಸೂರಿಗೆ ವಿಸ್ತರಣೆ: ಈಗ ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲನ್ನು ಮೈಸೂರಿಗೆ ವಿಸ್ತರಣೆ ಮಾಡಲಾಗಿದೆ. ಕಳೆದ ಡಿಸೆಂಬರ್ 28ರಂದು ಸಂಸದ ಪ್ರತಾಪ್ ಸಿಂಹ ಈ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದರು. ಇಂದು ಈ ಬಗ್ಗೆ ಆದೇಶ ಹೊರ ಬಿದ್ದಿದ್ದು, ಈ ರೈಲು ಕೆಂಗೇರಿ, ರಾಮ ನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಮನವಿಯನ್ನು ಮನ್ನಿಸಿ ಚೆನ್ನೈ-ಬೆಂಗಳೂರು ಎಕ್ಸ್‍ಪ್ರೆಸ್ ರೈಲನ್ನು ಮೈಸೂರಿಗೆ ವಿಸ್ತರಿಸಿದ್ದಕ್ಕೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಪ್ರತಾಪ್ ಸಿಂಹ ಅಭಿನಂದಿಸಿದ್ದಾರೆ.

Translate »