ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

January 9, 2019

ಮೈಸೂರು: ಕೇಂದ್ರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್‍ಗೆ ಮೊದಲ ದಿನವಾದ ಮಂಗಳವಾರ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬ್ಯಾಂಕುಗಳು, ಕಾರ್ಖಾನೆಗಳು, ಎಲ್‍ಐಸಿ, ಅಂಚೆ ಕಚೇರಿ, ಗಾರ್ಮೆಂಟ್ಸ್ ಉದ್ಯಮ ಹಾಗೂ ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದುದನ್ನು ಹೊರತುಪಡಿಸಿದರೆ, ಉಳಿ ದಂತೆ ಜನಜೀವನ ಸಾಮಾನ್ಯವಾಗಿತ್ತು.

ಬಂದ್ ಹಿನ್ನೆಲೆಯಲ್ಲಿ ಸಹಜವಾಗಿ ಮೈಸೂರು ನಗರದಲ್ಲಿ ಜನಜೀವನ, ವಾಹನ ಗಳ ಸಂಚಾರ ವಿರಳವಾಗಿದ್ದನ್ನು ಬಿಟ್ಟರೆ, ವ್ಯಾಪಾರ, ವಹಿವಾಟು ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಂದ್ ಬಿಸಿ ತಟ್ಟಲಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾ ಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಆಟೋರಿಕ್ಷಾ, ಟ್ಯಾಕ್ಸಿ, ಪ್ರವಾಸಿ ವಾಹನ, ಟೆಂಪೋ, ಸರಕು ಸಾಗಣೆ ವಾಹನಗಳು, ನಗರ ಮತ್ತು ಗ್ರಾಮಾಂತರ ಕೆಎಸ್‍ಆರ್‍ಟಿಸಿ ಬಸ್ಸುಗಳು, ಲಾರಿ, ಟ್ಯಾಂಕರ್‍ಗಳು, ಖಾಸಗಿ ಬಸ್ಸುಗಳು, ವೋಲಾ. ಊಬರ್ ವಾಹನ ಗಳು ಬಹುತೇಕ ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ಜನ ಜೀವನದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾ ಗಲಿಲ್ಲ. ಹೋಟೆಲ್‍ಗಳು, ಸಿನಿಮಾ ಮಂದಿರ, ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್‍ಗಳು, ಇಂದಿರಾ ಕ್ಯಾಂಟೀನ್‍ಗಳು ತೆರೆದಿದ್ದವು. ರೈಲು ಸಂಚಾರ ಎಂದಿನಂತೆ ಇತ್ತು. ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್, ಹಳೇ ಆರ್‍ಎಂಸಿ, ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆ, ದೇವರಾಜ, ಕೆ.ಆರ್ ಹಾಗೂ ಮಂಡಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸಾಮಾನ್ಯ ವಾಗಿತ್ತು. ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಕ್ಕಾಜಿ ಚೌಕ, ಶಿವರಾಂ ಪೇಟೆ, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ಸರ್ಕಲ್, ಅಶೋಕ ರಸ್ತೆ, ಧನ್ವಂತರಿ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಮೈಸೂರು ನಗರದಾದ್ಯಂತ ವಹಿವಾಟು ಸಹಜ ಸ್ಥಿತಿಯಲ್ಲಿತ್ತು.

ಉದ್ಯಮ ಪೂರ್ಣ ಬಂದ್: ಎಐಸಿಯುಟಿ, ಜೆಸಿಟಿಯು, ಸಿಐಟಿಯು ಸೇರಿದಂತೆ ವಿವಿಧ 11 ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆಕೊಟ್ಟಿದ್ದರಿಂದ ಸಹಜವಾಗಿ ಕಾರ್ಮಿಕ ಸಮುದಾಯ ಮುಷ್ಕರದಲ್ಲಿ ಪಾಲ್ಗೊಂಡಿತ್ತು. ಪರಿಣಾಮ ಹೆಬ್ಬಾಳು, ಮೇಟಗಳ್ಳಿ, ಯಾದವಗಿರಿ, ಕೂರ್ಗಳ್ಳಿ, ಹೂಟ ಗಳ್ಳಿ ಕೈಗಾರಿಕಾ ಬಡಾವಣೆ, ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್, ತಾಂಡ್ಯ, ತಾಂಡವ ಪುರ ಕೈಗಾರಿಕಾ ಪ್ರದೇಶಗಳ ಎಲ್ಲಾ ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಪೂರ್ಣ ಬಂದ್ ಆಗಿದ್ದವು. ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ಪಿ.ಎಸ್. ಶಿವಕುಮಾರ್, ರಾಮಕೃಷ್ಣ, ಮೈಪಾಲ್ ರೇವಣ್ಣ, ಟೋನಿ ಜಾನ್ ನೇತೃತ್ವದಲ್ಲಿ ಸಾವಿರಾರು ಕಾರ್ಮಿ ಕರು ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಿಂದ ಬೈಕ್ ರ್ಯಾಲಿ ನಡೆಸಿದರು. ನಂತರ ರಾಮಸ್ವಾಮಿ ಸರ್ಕಲ್‍ನಿಂದ ಚಾಮ ರಾಜ ಜೋಡಿ ರಸ್ತೆ,ಹಾರ್ಡಿಂಜ್ ಸರ್ಕಲ್ ಮೂಲಕ ಪುರಭವನ ಬಳಿಗೆ ಬೈಕ್ ರ್ಯಾಲಿಯಲ್ಲಿ ಬಂದ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಇಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಶಾಲಾ ಬಿಸಿಯೂಟ ಕೆಲಸಗಾರರು, ಎಲ್‍ಐಸಿ ನೌಕರರು, ಬ್ಯಾಂಕ್ ನೌಕರರು, ಅಂಚೆ ಕಚೇರಿ ನೌಕರರೂ ಸಹ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ ರಜೆ ನೀಡಿರಲಿಲ್ಲವಾದರೂ, ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ನೌಕರರ ಹಾಜರಾತಿ ಕಡಿಮೆ ಇದ್ದುದು ಕಂಡು ಬಂದಿತು. ಕಾರ್ಮಿಕರು ಬಹುಸಂಖ್ಯೆಯಲ್ಲಿ ನಗರದಾದ್ಯಂತ ಭಾರೀ ಪ್ರತಿಭಟನೆ ನಡೆಸಿದ್ದನ್ನು ಹೊರತುಪಡಿಸಿದಲ್ಲಿ ಬಹುತೇಕ ಬಂದ್ ಶಾಂತಿಯುತವಾಗಿ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆಗಳಾದ ಬಗ್ಗೆ ವರದಿಯಾಗಿಲ್ಲ. ಬಂದ್ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ನಗರ ಪೊಲೀಸ್ ಕಮೀಷನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್ ನೇತೃತ್ವದಲ್ಲಿ ಡಿಸಿಪಿ ಡಾ. ವಿಕ್ರಂ ವಿ. ಅಮಟೆ, ಎಸಿಪಿಗಳಾದ ಗಜೇಂದ್ರಪ್ರಸಾದ್, ಸಿ. ಗೋಪಾಲ್, ಧರ್ಮಪ್ಪ ಅವರು ಬಂದೋಬಸ್ತ್ ಮೇಲ್ವಿಚಾರಣೆ ನಡೆಸಿದರು.

ನಾಳೆ (ಜ.9)ಯೂ ಸಹ ಬಂದ್ ಇದೆಯಾದರೂ ಅದರ ಬಿಸಿ ಜನಸಾಮಾನ್ಯರ ಜೀವನದ ಮೇಲೆ ತಟ್ಟುವುದು ಅನುಮಾನ. ಆದರೆ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Translate »