ಲಾಕ್‍ಡೌನ್ ಪರಿಣಾಮ: ಪರ್ಯಾಯ ದಾರಿ ಕಂಡುಕೊಂಡ ಮೂಲ ಕಸುಬುಗಾರಿಕೆ ಕಾರ್ಮಿಕರು
ಮೈಸೂರು

ಲಾಕ್‍ಡೌನ್ ಪರಿಣಾಮ: ಪರ್ಯಾಯ ದಾರಿ ಕಂಡುಕೊಂಡ ಮೂಲ ಕಸುಬುಗಾರಿಕೆ ಕಾರ್ಮಿಕರು

April 18, 2020

– ರಾಜಕುಮಾರ್ ಭಾವಸಾರ್

ಮೈಸೂರು, ಏ.16(ಆರ್‍ಕೆಬಿ)- ಲಾಕ್ ಡೌನ್ ನಂತರ ಮೈಸೂರಿನ ಬೀದಿ, ಬೀದಿ ಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರದ ಅಂಗಡಿಗಳು ಹೆಚ್ಚುತ್ತಿವೆ. ಕೆಲವು ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾತ್ರ ಅಲ್ಲೊಂದು, ಇಲ್ಲೊಂದು ತರಕಾರಿ, ಹಣ್ಣಿನ ಅಂಗಡಿ ಗಳು ಇದ್ದವು. ಆದರೆ ಕಳೆದ 15 ದಿನಗಳಿಂ ದೀಚೆಗೆ ನಗರದ ಬಹುತೇಕ ರಸ್ತೆಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರ ಜೋರಾಗಿದೆ. ಜನರು ಸಹ ತರಕಾರಿ, ಹಣ್ಣು ಕೊಳ್ಳಲು ಬಹು ದೂರ ಹೋಗದೆ ಸನಿಹದಲ್ಲೇ ಇರುವ ಈ ತರಕಾರಿ ಅಂಗಡಿಗಳಲ್ಲಿಯೇ ಖರೀದಿಯಲ್ಲಿ ತೊಡಗಿದ್ದಾರೆ.

ಲಾಕ್‍ಡೌನ್ ನಡುವೆಯೂ ತರಕಾರಿ, ಹಣ್ಣು ಮಾರಾಟಕ್ಕೆ ಯಾವುದೇ ಅಡೆತಡೆ ಇಲ್ಲದಿರುವುದು ತರಕಾರಿ ಮಾರಾಟ ಹೆಚ್ಚಲು ಕಾರಣವಾಗಿದೆ. ಲಾಕ್‍ಡೌನ್ ಪರಿಣಾಮ ದಿಂದಾಗಿ ಕೃಷಿ ಮತ್ತು ಕೂಲಿ ಕಾರ್ಮಿಕರು ಮನೆಯಲ್ಲೇ ಕೂರುವಂತಾಗಿದ್ದು, ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇರುವ ಸಂದರ್ಭದಲ್ಲಿ ಕೆಲವು ಕಾರ್ಮಿಕರು ಜೀವನ ನಿರ್ವಹಣೆಗೆ ಕಂಡುಕೊಂಡ ಹೊಸ ದಾರಿಯೇ ತರಕಾರಿ ಮತ್ತು ಹಣ್ಣಿನ ವ್ಯಾಪಾರ.

ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಘೋಷಿಸಿರುವ ಸರ್ಕಾರ ಮನೆ ಯಲ್ಲಿರಿ, ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಜನರನ್ನು ಬಲವಂತವಾಗಿ ಮನೆಯಲ್ಲಿ ಕೂರಿಸಿದೆ. ಇದರಿಂದ ಬಹುತೇಕ ಎಲ್ಲ ಉದ್ಯಮಗಳು ಬಂದ್ ಆಗಿ, ಅಂದಂದಿನ ದುಡಿಮೆಯನ್ನೇ ನಂಬಿ ಕುಟುಂಬ ನಿರ್ವ ಹಣೆ ಮಾಡುತ್ತಿದ್ದ ಕೃಷಿ ಮತ್ತು ಕೂಲಿ ಕಾರ್ಮಿಕರು ಹಣೆಯ ಮೇಲೆ ಕೈಹೊತ್ತು ಮುಂದೇನು ಎಂಬ ಚಿಂತೆಯಲ್ಲಿ ದಿನ ದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಕಾರ್ಮಿಕರಿಗೆ ಹೊಸದೊಂದು ಐಡಿಯಾ ಹೊಳೆಯಿತು. ಲಾಕ್‍ಡೌನ್ ವೇಳೆ ದಿನನಿತ್ಯದ ಸೇವೆಗಳಾದ ಹಾಲು, ತರಕಾರಿ, ಹಣ್ಣು, ದಿನಸಿ ಮಾರಾಟಕ್ಕೆ ರಿಯಾ ಯಿತಿ ಇರುವುದನ್ನೆ ಬಳಕೆ ಮಾಡಿಕೊಂಡಿ ದ್ದಾರೆ. ತಮ್ಮ ತಮ್ಮ ಪ್ರದೇಶದಲ್ಲಿಯೇ ತರಕಾರಿ, ಹಣ್ಣು ಮಾರಾಟದ ದಾರಿ ಕಂಡು ಕೊಂಡಿದ್ದಾರೆ. ಲಾಕ್‍ಡೌನ್ ತೆರವುಗೊಂಡು ತಮ್ಮ ಮೂಲ ಕಸುಬು ಪುನಾರಂಭ ಗೊಳ್ಳುವವರೆಗೆ ಇದೇ ಸರಿ ಎಂದು ಸಣ್ಣ ವ್ಯಾಪಾರದಲ್ಲಿ ತೊಡಗಿದ್ದಾರೆ.

ಕಳೆದ ಹತ್ತಾರು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಆರ್.ರಾಜೇಶ್, ಇಂದು ತರಕಾರಿ ಮಾರಾಟದಲ್ಲಿ ತೊಡಗಿ ದ್ದಾರೆ. ಕೃಷಿ ಕಾರ್ಮಿಕನಾಗಿದ್ದ ಸೋಮಣ್ಣ ಎಂಬುವರು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಮಲ್ಲಿಗಮ್ಮ ತರಕಾರಿ ವ್ಯಾಪಾರ ದಲ್ಲಿ ತೊಡಗಿದ್ದಾರೆ. ರಂಗಸ್ವಾಮಿ ಎಂಬು ವರು ಹಾಲು ಮಾರಾಟ ಮಾಡುತ್ತಿದ್ದಾರೆ.

ಇದು ಅವರ ಮೂಲ ಕಸುಬಲ್ಲದಿದ್ದರೂ, ಲಾಕ್‍ಡೌನ್‍ನಿಂದಾಗಿ ತಮ್ಮ ಮೂಲ ಕಸುಬು ಸ್ಥಗಿತಗೊಂಡಿರುವುದರಿಂದ ಮನೆಯಲ್ಲಿ ಕೂರಲಾಗದೆ, ಜೀವನ ನಿರ್ವಹಣೆಗೆ ಬೇರೆ ಕಸುಬನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾನೇಕೆ ಹಣ್ಣು, ತರಕಾರಿ ಮಾರಾಟ ಮಾಡ ಬಾರದು? ಲಾಕ್‍ಡೌನ್ ತೆರವು ಗೊಳಿಸು ವವರೆಗೆ ತಾತ್ಕಾಲಿಕವಾಗಿ ಈ ವ್ಯಾಪಾರ ಮಾಡಬಾರದೇಕೆ? ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಂಡು ಪರ್ಯಾಯ ದಾರಿ ಕಂಡು ಕೊಂಡಿದ್ದಾರೆ.

ಗಾರೆ ಕೆಲಸಕ್ಕೆ ಹೋಗುತ್ತಿದ್ದೆ. ನಮ್ಮ ಗುತ್ತಿಗೆ ದಾರ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತ ಗೊಳಿಸಿದ್ದರಿಂದ ಕೂಲಿ ಇಲ್ಲ. ಮನೆಯಲ್ಲಿ ಕುಳಿತೆ. ಇದ್ದ ಹಣ 4-5 ದಿನದಲ್ಲಿ ಖರ್ಚಾ ಯಿತು. ಆಗ ಯೋಚಿಸಿದೆ. ದಿನಸಿ, ತರಕಾರಿ, ಹಣ್ಣಿನ ವ್ಯಾಪಾರಕ್ಕೆ ಯಾರ ಅಡ್ಡಿಯೂ ಇಲ್ಲ ಎಂದು ತಿಳಿದು, ತರಕಾರಿ ತಂದು ಎಲ್ಲಿ ಯಾದರು ಒಂದೆಡೆ ಕುಳಿತು ಏಕೆ ಮಾರಾಟ ಮಾಡಬಾರದು ಎಂದೆನಿಸಿತು. ತಕ್ಷಣ ಮಾರುಕಟ್ಟೆಗೆ ಹೋಗಿ ಒಂದಷ್ಟು ತರಕಾರಿ ತಂದು ಒಂದೆಡೆ ಹರಡಿಕೊಂಡು ವ್ಯಾಪಾರಕ್ಕೆ ಕುಳಿತೆ. ಒಂದಷ್ಟು ವ್ಯಾಪಾರವೂ ಆಗತೊಡ ಗಿತು. ಈಗ ಕಳೆದ 10 ದಿನಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ. ಅಷ್ಟೇನು ಲಾಭ ವಿಲ್ಲದಿದ್ದರೂ ಮನೆಯಲ್ಲಿರುವ ಐದು ಮಂದಿಯ ಆಯಾ ದಿನದ ಊಟದ ಖರ್ಚು ಸರದೂಗಿಸುವಷ್ಟು ಸಂಪಾದಿಸುತ್ತಿದ್ದೇನೆ ಎನ್ನುತ್ತಾರೆ ಆರ್.ರಾಜೇಶ್.

ಮನೆ ಕೆಲಸಕ್ಕೆ ಹೋಗಿ ಅವರು ಕೊಟ್ಟಷ್ಟು ಹಣ ಪಡೆದು ಜೀವನ ನಿರ್ವಹಿಸುತ್ತಾ ಬಂದಿದ್ದ ಮಲ್ಲಿಗಮ್ಮ ಅವರು ಲಾಕ್‍ಡೌನ್ ನಿಂದ ಎದೆಗುಂದಲಿಲ್ಲ. ತರಕಾರಿ, ಹೂವಿನ ಮಾರಾಟ ನಡೆಯುತ್ತಿರುವುದನ್ನು ಕಂಡು ತಾನೂ ಏಕೆ ತರಕಾರಿ, ಹೂವು ಮಾರ ಬಾರದು ಎಂದು ನಿರ್ಧರಿಸಿ, ತಳ್ಳು ಗಾಡಿ ಯೊಂದರಲ್ಲಿ ತರಕಾರಿ ಇಟ್ಟುಕೊಂಡು ಒಂದೆಡೆ ಕುಳಿತರು. ಏನೂ ಇಲ್ಲದೆ ಸುಮ್ಮನೆ ಕೂರುವ ಬದಲು ಈಗ ಕೈಯಲ್ಲಿ ಒಂದಷ್ಟು ಕಾಸು ಓಡಾಡುತ್ತಿದೆ. ಬಂದಷ್ಟು ಬರಲಿ ಎಂದು ವ್ಯಾಪಾರ ಮಾಡುತ್ತಿದ್ದು, ಸದ್ಯ ಯಾರಿಂ ದಲೂ ತೊಂದರೆ ಇಲ್ಲ ಎನ್ನುತ್ತಾರೆ ಅವರು.

ಲಾಕ್‍ಡೌನ್ ಪರಿಣಾಮ ಕೆಲಸವಿಲ್ಲದೆ, ದಿನನಿತ್ಯದ ಊಟಕ್ಕೂ ಕಾಸಿಲ್ಲದ ಪರಿಸ್ಥಿತಿ ಯಲ್ಲಿದ್ದ ಕೃಷಿ ಕಾರ್ಮಿಕ ಸೋಮಣ್ಣ, ತೆಂಗಿನಕಾಯಿ ಮಾರಾಟದಲ್ಲಿ ತೊಡಗಿದ್ದಾರೆ. ದಿನಕ್ಕೆ 120 ಕಾಯಿ ಮಾರಾಟ ಮಾಡುವ ಅವರು 1 ಕಾಯಿಗೆ ಎರಡು ರೂ. ಲಾಭ ಇಟ್ಟುಕೊಂಡು ಪ್ರತಿನಿತ್ಯ 240 ರೂ. ಗಳಿಸುತ್ತಿದ್ದಾರೆ. ಕಟ್ಟಡ ನಿರ್ಮಾಣದ ಕಬ್ಬಿ ಣದ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಈಗ ಹಾಲು ಮಾರಾಟದ ದಾರಿ ಕಂಡು ಕೊಂಡಿ ದ್ದಾರೆ. ಮುಂಜಾನೆಯೇ ಎದ್ದು ಹೋಲ್ ಸೇಲ್ ದರದಲ್ಲಿ ಹಾಲು ಖರೀದಿಸಿ, 1 ರೂ. ಲಾಭ ಇಟ್ಟುಕೊಂಡು ಮನೆ ಮನೆಗೆ ಹೋಗಿ ಹಾಲಿನ ಪ್ಯಾಕೆಟ್ ಮೇಲಿರುವ ದರಕ್ಕೆ ಹಾಲು ಮಾರಾಟ ಮಾಡುತ್ತಿದ್ದಾರೆ. ಇದರಿಂದ ನನಗೆ ಪ್ರತಿದಿನ 75 ರೂ. ಲಾಭದ ಖುಷಿ ಯಲ್ಲಿದ್ದಾರೆ. ಈ ಹಣದಲ್ಲಿ ದಿನದ ಜೀವನ ನಿರ್ವಹಿಸುತ್ತಿದ್ದೇನೆ ಎಂಬುದು ರಂಗಸ್ವಾಮಿ ಅವರ ಸಮಾಧಾನದ ನುಡಿ. ಕಾರ್ಮಿಕರು ತಮ್ಮ ದಾರಿ ತಾವು ಕಂಡು ಕೊಂಡರೆ ಇತ್ತ ರೈತರು ಸಹ ಮೈಸೂರಿನ ಬೀದಿ ಬೀದಿ ಗಳಿಗೆ ತಾವು ಬೆಳೆದ ತರಕಾರಿಗಳನ್ನು ಕೊಂಡೊಯ್ದು ಮಾರಾಟದಲ್ಲಿ ತೊಡಗಿದ್ದಾರೆ.

Translate »