ಹಾಪ್‍ಕಾಮ್ಸ್‍ನಲ್ಲಿ 7 ಟನ್‍ನಿಂದ 15 ಟನ್‍ಗೆ ಹೆಚ್ಚಿದ ಹಣ್ಣಿನ ಮಾರಾಟ
ಮೈಸೂರು

ಹಾಪ್‍ಕಾಮ್ಸ್‍ನಲ್ಲಿ 7 ಟನ್‍ನಿಂದ 15 ಟನ್‍ಗೆ ಹೆಚ್ಚಿದ ಹಣ್ಣಿನ ಮಾರಾಟ

April 18, 2020

ಮೈಸೂರು, ಏ.17(ಆರ್‍ಕೆಬಿ)- ಲಾಕ್‍ಡೌನ್ ಪರಿಣಾಮ ಮೈಸೂರಿನಲ್ಲಿ ತರಕಾರಿ ಮತ್ತು ಹಣ್ಣಿನ ಮಾರಾಟದಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಹಾಪ್‍ಕಾಮ್ಸ್‍ನಲ್ಲಿ ಪ್ರತಿದಿನ 7 ಟನ್‍ನಷ್ಟು ಮಾರಾಟವಾಗುತ್ತಿದ್ದ ಹಣ್ಣು ಇದೀಗ 15 ಟನ್‍ಗೆ ಹೆಚ್ಚಳವಾಗಿದೆ. ಹಾಗೆಯೇ ತರಕಾರಿ ಮಾರಾಟದಲ್ಲೂ ಎರ ಡರಷ್ಟು ಹೆಚ್ಚಳವಾಗಿದೆ.

ಸೇಬು, ಕಿತ್ತಳೆ, ದ್ರಾಕ್ಷಿ, ದಾಳಿಂಬೆ, ಕರಬೂಜ ಇನ್ನಿತರ ಹಣ್ಣುಗಳು ಹೆಚ್ಚಾಗಿ ಖರ್ಚಾಗುತ್ತಿವೆ. ಹಾಪ್‍ಕಾಮ್ಸ್ ವತಿಯಿಂದ ಮನೆ ಮನೆಗೆ ಹಣ್ಣು ತರಕಾರಿ ಮಾರಾಟವೂ ಇದಕ್ಕೆ ಪೂರಕವಾಗಿದೆ.

ತೋಟಗಾರಿಕೆ ಉಪ ನಿರ್ದೇಶಕರ ರುದ್ರೇಶ್ ಪ್ರಕಾರ ಲಾಕ್‍ಡೌನ್‍ನಿಂದ ಜನರು ಮನೆಯಲ್ಲೇ ಉಳಿದಿರುವುದರಿಂದ ತರಕಾರಿ ಮತ್ತು ಹಣ್ಣಿನ ವ್ಯಾಪಾರ ಹೆಚ್ಚಳವಾಗಿದೆ. ಇಡೀ ಕುಟುಂಬ ಒಟ್ಟಾಗಿ ಮನೆಯಲ್ಲಿ ಉಳಿದಿರುವುದು ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಅವರು. ಇನ್ನು ತರಕಾರಿ ಮಾರಾಟದ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ. ತರಕಾರಿ ಮಾರಾಟವೂ ಹೆಚ್ಚುತ್ತಿದೆ. ಜನರು ದಿನನಿತ್ಯ ತರಕಾರಿಯನ್ನೇ ಹೆಚ್ಚಾಗಿ ಉಪಯೋಗಿಸುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಮಾರಾಟ ಮಾಮೂಲಿ ಗಿಂತ ದ್ವಿಗುಣಗೊಂಡಿದೆ. ಲಾಕ್‍ಡೌನ್‍ನಿಂದಾಗಿ ತರಕಾರಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಹೋಗದಿರುವ ಹಿನ್ನೆಲೆಯಲ್ಲಿ ಅವು ಅಲ್ಲಲ್ಲಿಯೇ ಸ್ಥಳೀಯವಾಗಿ ಜನರಿಗೆ ದೊರೆಯುತ್ತಿದೆ. ಜನರು ಹೆಚ್ಚಾಗಿ ತರಕಾರಿ ಖರೀದಿಸುತ್ತಿದ್ದು, ಹೀಗಾಗಿ ತರಕಾರಿ, ಹಣ್ಣು ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಬೀನ್ಸ್, ಕ್ಯಾರೆಟ್, ಬೀಟ್‍ರೂಟ್, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ಕ್ಯಾಪ್ಸಿಕಂ, ನುಗ್ಗೇಕಾಯಿ ವ್ಯಾಪಾರ ಚೆನ್ನಾಗಿದೆ. ಬೀದಿ ಬೀದಿಗಳಲ್ಲಿ ಆಯಾ ಪ್ರದೇಶದಲ್ಲೇ ತರಕಾರಿ ಸಿಗುವಂತಾಗಿರುವುದು ತರಕಾರಿ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ.

Translate »