ವಿಶ್ವದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್: ಡಿಸಿ
ಚಾಮರಾಜನಗರ

ವಿಶ್ವದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್: ಡಿಸಿ

October 21, 2018

ಚಾಮರಾಜನಗರ: ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಹೋದರತೆ ತತ್ವಗಳ ಆಧಾರದಲ್ಲಿ ಸಂವಿಧಾನ ರಚಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಲ್ಲಿ ಹುಟ್ಟಿ ಅನೇಕ ಶೋಷಣೆ, ದೌರ್ಜನ್ಯ ಗಳನ್ನು ಅನುಭವಿಸಿ ಶೋಷಿತರ ಪರವಾಗಿ ದನಿ ಎತ್ತಿದ ಮಹಾನ್ ನಾಯಕರು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರಿಗೆ ಜ್ಞಾನದ ದಾಹವಿತ್ತು. ದೇಶದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿತು ಆಳವಾಗಿ ಅಧ್ಯಯನ ನಡೆಸಿ, ಇತರೆ ದೇಶಗಳ ಸಂವಿಧಾನಗಳನ್ನು ಪರಾ ಮರ್ಶಿಸಿ ನಮಗೆ ಶ್ರೇಷ್ಠ ಮಟ್ಟದ ಸಂವಿಧಾನವನ್ನು ನೀಡಿದ್ದಾರೆ. ಇದನ್ನು ಪ್ರಪಂಚದ ವಿವಿಧ ರಾಷ್ಟ್ರಗಳು ಅಳವಡಿಸಿಕೊಳ್ಳುವತ್ತ ಮುಂದಾಗಿವೆ. ಇದು ನಮ್ಮ ಹೆಮ್ಮೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಕಾರ್ಮಿಕರಿಗೆ ಸಂವಿಧಾನದಡಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ ಅಂಬೇಡ್ಕರರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕುರಿತು ಆಲೋಚಿಸುವ ಆದರ್ಶ ಗುಣವುಳ್ಳವ ರಾಗಿದ್ದರು. ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರು ಒಮ್ಮತದಿಂದ ಅಳವಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಮಕ್ಕಳು, ವಿದ್ಯಾರ್ಥಿಗಳಿಗೂ ತಿಳಿ ಹೇಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.

ಸಂವಿಧಾನದ ಮೂಲ ಆಶಯಗಳ ಕುರಿತು ವಿಚಾರ ಮಂಡಿಸಿದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಪ್ರಾಧ್ಯಾಪಕÀ ಹ.ರಾ.ಮಹೇಶ್ ಮಾತನಾಡಿ, ಪ್ರಜಾಸತ್ಯಾತ್ಮಕ ಮೌಲ್ಯಗಳ ಆಧಾರದಲ್ಲಿ ಸಂವಿಧಾನ ರೂಪಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ದೇಶದ 130 ಕೋಟಿ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿರುವುದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಆದರೆ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿರುವುದು ದೇಶದ ಮಹಾ ದುರಂತವೇ ಆಗಿದೆ ಎಂದು ವಿಷಾದಿಸಿದರು.

ವಿಶ್ವಮಟ್ಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ವಿಚಾರ ಸಾದರಪಡಿಸಿದ ಹೈಕೋರ್ಟ್‍ನ ವಕೀಲ ಎಚ್. ಮೋಹನ್‍ಕುಮಾರ್ ಮಾತನಾಡಿ, ಶೋಷಿತರು ಸೇರಿದಂತೆ ದೇಶದ ಎಲ್ಲ ಜನರು ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಕೇಂದ್ರಬಿಂದುವಾಗಿದ್ದರು. ಎಲ್ಲಾ ಸಮುದಾಯ ಗಳ ಸಮಸ್ಯೆಗಳನ್ನು ಪರಿಹರಿಸಿ ಘನತೆಯಿಂದ ಜೀವಿಸುವಂತೆ ಮಾಡುವುದೇ ಅಂಬೇಡ್ಕರ್ ಅವರ ಕನಸಾಗಿತ್ತು. ಆದ್ದರಿಂದಲೇ ಅಂಬೇಡ್ಕರ್ ಅವರು ವಿಶ್ವಮಾನ್ಯರಾಗಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಟಿ. ನರಸೀಪುರದ ನಳಂದ ಬೌದ್ಧ ವಿಹಾರದ ಪೂಜ್ಯ ಬೋಧಿರತ್ನ ಬಂತೇಜಿ ಅವರು ಮಾತನಾಡಿ, ಅಂಬೇ ಡ್ಕರರ ಆಲೋಚನೆಗಳು ನಮ್ಮ ಆಲೋಚನೆಗಳಾಗ ಬೇಕು. ಆಗ ಮಾತ್ರ ಸಂವಿಧಾನದ ಆಶಯಗಳು ಸಾರ್ಥಕವಾಗುತ್ತವೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪದ್ಮಾ ಶೇಖರ್ ಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ತಿರುಮಲೇಶ್ ಹಾಜರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಸಂಸದ ಆರ್.ಧ್ರುವ ನಾರಾಯಣ, ಪೂಜ್ಯ ಬೋಧಿರತ್ನ ಬಂತೇಜಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಇತರೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಲೆ ನಟರಾಜು ತಂಡದಿಂದ ಅಂಬೇಡ್ಕರ್ ಕುರಿತು ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Translate »