ಇಂದು ಸುಪ್ರೀಂನಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ
ಮೈಸೂರು

ಇಂದು ಸುಪ್ರೀಂನಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ

September 16, 2019

ಹೊಸದಿಲ್ಲಿ, ಸೆ.15- ಜಮ್ಮು ಮತ್ತು ಕಾಶ್ಮೀರ ರಾಜ್ಯ ದಶಕಗಳಿಂದ ಅನುಭವಿ ಸುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಸಾರಥ್ಯದಲ್ಲಿ ಹಲವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸೋಮ ವಾರ ನಡೆಯಲಿದೆ. ಅನುಚ್ಚೇದ 370ರ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ದೇಶಾದ್ಯಂತ ಭಾರೀ ಕುತೂ ಹಲ ಕೆರಳಿಸಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಗೊಳಿಸಲು ಸಂವಿಧಾನದ ಅನುಚ್ಛೇದ 370ನೇ ವಿಧಿಯನ್ನೇ ಮೋದಿ ಸರ್ಕಾರ ರದ್ದುಗೊಳಿಸಿತ್ತು. ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಬಳಿಕ ಲೋಕ ಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಮಸೂದೆ ಪಾಸ್ ಆಗಿತ್ತು. ಈ ಮೂಲಕ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನಕ್ಕೆ ಅಂತ್ಯ ಹಾಡಲಾಗಿತ್ತು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಸೂದೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ಗಳು ಭಾರೀ ಗದ್ದಲ, ಕೋಲಾಹಲ ಸೃಷ್ಟಿಸಿದ್ದವು. ಸರ್ಕಾರದ ನಿರ್ಧಾರವನ್ನು ಕಟು ಶಬ್ಧಗಳಲ್ಲಿ ಖಂಡಿಸಿದ್ದವು. ಆದರೆ, ಎನ್‍ಡಿಎ ಸರ್ಕಾರಕ್ಕೆ ಬಹುಮತ ಇರುವ ಕಾರಣ, ಲೋಕಸಭೆಯಲ್ಲಿ ಭಾರೀ ಮತಗಳ ಅಂತರದಿಂದ ಮಸೂದೆ ಪಾಸ್ ಆಯ್ತು, ರಾಜ್ಯಸಭೆಯಲ್ಲೂ ಹಲವು ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಿದ ಕಾರಣ, ಗೃಹ ಸಚಿವ ಅಮಿತ್ ಶಾ ಮಂಡಿಸಿದ ಮಸೂದೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಸಂಸತ್‍ನ ಒಳಗೆ ಸೋಲುಂಡ ಕಾಂಗ್ರೆಸ್, ಸಂಸತ್‍ನ ಹೊರಗೂ ಪ್ರತಿಭಟನೆ ಆರಂಭಿಸಿತ್ತು. ಕಾಶ್ಮೀರಕ್ಕೆ ಪ್ರವೇಶ ನೀಡುವಂತೆ ಸರ್ಕಾರದ ಜೊತೆ ಜಟಾಪಟಿಗೆ ಇಳಿದಿತ್ತು. ಕಣಿವೆ ರಾಜ್ಯ ಕಾಶ್ಮೀರದವರೇ ಆದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಗುಲಾಂ ನಬಿ ಆಜಾದ್, ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಕಾಂಗ್ರೆಸ್ ನಾಯಕರ ವಾದವೇನು?: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ, ಮೋದಿ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾನೂನಿನ ಅನ್ವಯ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಜಮ್ಮು-ಕಾಶ್ಮೀರ ವಿಧಾನಸಭೆಯ ಅನುಮತಿ ಬೇಕು. ಆದರೆ, ಇದೀಗ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದೆ. ಮೊದಲಿಗೆ ಜಮ್ಮು-ಕಾಶ್ಮೀರ ರಾಜ್ಯದ ವಿಧಾನಸಭೆಯನ್ನೇ ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಹೇರಲಾಯ್ತು. ಬಳಿಕ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತ ಇರುವ ಕಾರಣ ಮೋದಿ ಸರ್ಕಾರ ಮಸೂದೆ ಪಾಸ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಶ್ಮೀರ ಜನರ ಅಸ್ಮಿತೆ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂಬುದು ಕಾಂಗ್ರೆಸ್ ವಾದ.

Translate »