ಅತಿವೃಷ್ಟಿ, ಅನಾವೃಷ್ಟಿಯಿಂದ ಅಂದಾಜು 300 ಕೋಟಿ ರೂ. ಹಾನಿ
ಹಾಸನ

ಅತಿವೃಷ್ಟಿ, ಅನಾವೃಷ್ಟಿಯಿಂದ ಅಂದಾಜು 300 ಕೋಟಿ ರೂ. ಹಾನಿ

September 5, 2018

ಬೇಲೂರು: ಈ ಬಾರಿಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾಲೂಕಿನಲ್ಲಿ ಕಾಫಿ, ಮೆಣಸು ಹಾಗೂ ಇನ್ನಿತರೆ ಬೆಳೆ ಸೇರಿದಂತೆ ರಸ್ತೆ, ಸೇತುವೆ ಸರ್ಕಾರಿ ಕಟ್ಟಡ, ಮನೆಗಳು ಹಾನಿಯಾಗಿ 300 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದ್ದು, ನಷ್ಟ ಭರಿಸುವುದಕ್ಕೆ ಕೇಂದ್ರ, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಒತ್ತಾಯಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗ ಸಭೆ ನಡೆಸಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಭವಿಸಿದ ನಷ್ಟದ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಅನೇಕ ರಸ್ತೆ, ಸೇತುವೆ, ಗುಡ್ಡ ಕುಸಿತ ಹಾಗೂ ಅತೀ ಹೆಚ್ಚಾಗಿ ಬೆಳೆ ನಷ್ಟ ಸಂಭವಿಸಿದ್ದರೆ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಗಳಲ್ಲಿ ಮಳೆ ಇಲ್ಲದೆ ಅನಾವೃಷ್ಟಿಯಿಂದ ನಷ್ಟ ಸಂಭವಿಸಿದೆ. ಈ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ 8 ಗ್ರಾಪಂಗಳಲ್ಲಿ ಕುಡಿಯುವ ನೀರಿಗೆ ತೀವ್ರವಾಗಿ ತೊಂದರೆಯಾಗಿದ್ದು, ಟ್ಯಾಂಕ್, ಕೊಳವೆ ಬಾವಿ ಅಥವಾ ಬಾಡಿಗೆ ಕೊಳವೆ ಬಾವಿಯಿಂದ ನೀರು ಪಡೆಯುವುದಕ್ಕೆ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದ ಅವರು, ಮಲ್ಟಿ ವಿಲೇಜ್ ಸ್ಕೀಂನಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಅನಾವೃಷ್ಟಿಯಿಂದ ಈ ಭಾಗದ ರೈತರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕಿನಲ್ಲಿ ಅತಿವೃಷ್ಟಿಯಿಂದ ಲೋಕೋಪಯೋಗಿ, ಕೃಷಿ, ತೋಟ ಗಾರಿಕೆ, ಕಂದಾಯ, ರೇಷ್ಮೆ ಇಲಾಖೆ, ಪುರ ಸಭೆ, ಸೆಸ್ಕ್, ತಾಪಂ, ಗ್ರಾಮೀಣ ಕುಡಿ ಯುವ ನೀರು ನೈರ್ಮಲ್ಯ ಇಲಾಖೆ, ಪಂಚಾ ಯತ್ ರಾಜ್ ಇಲಾಖೆಗಳ ಮಾಹಿತಿ ಯಂತೆ ಅಂದಾಜು 140 ಕೋಟಿ ರೂ.ನಷ್ಟು ಹಾಗೂ ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು ಸೇರಿ 150 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದ್ದು, ಅಂದಾಜು 300 ಕೋಟಿ ರೂ.ಗಳ ನಷ್ಟದ ಪ್ರತಿ ಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧಪಡಿಸ ಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ರಾಜು, ಈಗಾಗಲೇ ತಾಲೂಕಿ ನಾದ್ಯಂತ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಬಗ್ಗೆ ಕೆಲವೊಂದು ಇಲಾಖೆಯಿಂದ ಮಾತ್ರ ಮಾಹಿತಿ ಬಂದಿದ್ದು, ಇನ್ನುಳಿದ ಇಲಾಖೆಗಳಿಂದ ಇನ್ನೂ ಸರಿಯಾದ ಮಾಹಿತಿ ಬಂದಿಲ್ಲ. ಬಂದ ನಂತರ ನಿಗದಿತ ನಷ್ಟ ಅಂದಾಜಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಕಮಲಾ ಚಿಕ್ಕಣ್ಣ, ಪ್ರಭಾರ ಇಓ ದಯಾನಂದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Translate »