ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸಿ: ಹೆಚ್.ಡಿ.ದೇವೇಗೌಡ
ಹಾಸನ

ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸಿ: ಹೆಚ್.ಡಿ.ದೇವೇಗೌಡ

September 5, 2018

ಹಾಸನ: ಎತ್ತಿನ ಹೊಳೆ ಸೇರಿದಂತೆ ಪ್ರಗತಿಯಲ್ಲಿರುವ ನೀರಾವರಿ ಯೋಜನೆ ಹಾಗೂ ಜಿಲ್ಲಾ ವ್ಯಾಪ್ತಿಯ ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಮಾಜಿ ಪ್ರಧಾನಿ, ಸಂಸದ ಹೆಚ್.ಡಿ. ದೇವೇಗೌಡ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಿಗೆ ವಶಪಡಿ ಸಿಕೊಳ್ಳುವ ಭೂಮಿಗೆ ಸಕಾಲದಲ್ಲಿ ರೈತ ರಿಗೆ ಪರಿಹಾರ ನೀಡಿ, ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಎಂದರು.

ಸಕಲೇಶಪುರ, ಬೇಲೂರು, ಚಿಕ್ಕಮಗ ಳೂರು ರೈಲ್ವೆ ಮಾರ್ಗ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ರೈಲ್ವೆ ಯೋಜನೆ ಗಳಿಗೂ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಮುಗಿಸಬೇಕು. ಹಾಸನ ರೈಲ್ವೆ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣದ ಬಳಿಗೆ ಸ್ಥಳಾಂತರಿಸುವ ಯೋಜನೆಗೂ ಮಂಜೂರಾತಿ ದೊರೆತಿದ್ದು, ಹಾಸನ ನಗರದ ಎನ್.ಆರ್. ವೃತ್ತದಿಂದ ಕೆಎಸ್ಆರ್‌ಟಿಸಿ ನಿಲ್ದಾಣದವರೆಗಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಪ್ರಾರಂಭಿಸಿ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಹಾಜರಿದ್ದ ಶಾಸಕರಾದ ಶಿವಲಿಂಗೇಗೌಡ, ಹೆಚ್.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ, ಬಾಲಕೃಷ್ಣ, ಲಿಂಗೇಶ್ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮಾಜಿ ಪ್ರಧಾನಿ ದೇವೇಗೌಡರ ಮುಂದೆ ತೆರೆದಿಟ್ಟರು. ಎತ್ತಿನಹಳ್ಳ ಯೋಜನೆ ಹಾಗೂ ಇತರ ಯೋಜನೆಗಳಲ್ಲಿ ಪರಿ ಹಾರ ವಿತರಣೆ ವಿಳಂಬ ಕುರಿತು ಜಿಲ್ಲೆಗೆ ಹೆಚ್ಚುವರಿ ಭೂಸ್ವಾಧೀನಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ನೀರಾವರಿ ಯೋಜನೆಗಳು ಜಾರಿಯಲ್ಲಿದ್ದು, ಈ ಹಿಂದೆಯೇ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ 200 ಕೋಟಿ ರೂ. ಭೂ ಪರಿಹಾರ ವಿತರಣೆ ಬಾಕಿ ಇದೆ. ಎತ್ತಿನ ಹೊಳೆ ಯೋಜನೆ ಜಿಲ್ಲೆಯಲ್ಲಿ 2 ಹಂತ ಗಳಲ್ಲಿ ನಡೆಯುತ್ತಿದ್ದು, ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ನೇರ ಖರೀದಿ ಮೂಲಕ ಮಾಡಲಾಗುತ್ತಿದೆ. ಅರಸೀಕೆರೆ ತಾಲೂಕಿನಲ್ಲಿ 2ನೇ ಹಂತದ ಯೋಜನೆ ಜಾರಿಯಾಗಬೇಕಿದ್ದು, ಸಾಮಾಜಿಕ ಪರಿ ಣಾಮ ಸಮೀಕ್ಷೆ ನಡೆಸಿ ಆ ನಂತರ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕಿದೆ ಎಂದರು.

ಸಭೆಯಲ್ಲಿ ಜಿಲ್ಲೆಯ ಕೆಲವೆಡೆ ಮುಂದು ವರೆದಿರುವ ಬರ ಪರಿಸ್ಥಿತಿ, ಕಳೆದ ಸಾಲಿನಲ್ಲಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಸಿದ ಬಾಕಿ ಬಿಲ್ ಪಾವತಿ, ನಾಶವಾದ ತೆಂಗು ಬೆಳೆಗೆ ಪರಿಹಾರ ಸೇರಿದಂತೆ ಅತಿವೃಷ್ಟಿ- ಅನಾವೃಷ್ಟಿಗಳಿಂದಾಗಿರುವ ಬೆಳೆ ಹಾನಿ ಪರಿಹಾರ ವಿತರಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಆದಷ್ಟು ಶೀಘ್ರ ವಾಗಿ ಅದನ್ನು ದುರಸ್ತಿಪಡಿಸುವಂತೆ ಹಾಗೂ ಮಳೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿ ಸುವಂತೆ ಮಾಜಿ ಪ್ರಧಾನಿ ಸೂಚಿಸಿದರು.

ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಶಿರಾಡಿ, ಬಿಸಲೆ ಸೇರಿದಂತೆ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದರು.

ಕೆ.ಎಂ.ಶಿವಲಿಂಗೇಗೌಡ, ಯಗಚಿ ನದಿಯಿಂದ ಅರಸೀಕೆರೆಯ 30 ಗ್ರಾಮಗಳಿಗೆ ನೀರು ದೊರೆಯಬೇಕಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಆದಷ್ಟು ತುರ್ತಾಗಿ ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.

ಅಧಿಕಾರಿ ಮೇಲೆ ಸಿಟ್ಟಾದ ಶಾಸಕ ಕೆಎಂಶಿ: ಹಾಸನ ಜಿಲ್ಲೆಯಲ್ಲಿನ ಮಳೆ ಮತ್ತು ಅಂತರ್ಜಲದ ಕುರಿತು ವಿವರ ನೀಡುವಾಗ ಹಿರಿಯ ಭೂವಿಜ್ಞಾನ ಅಧಿಕಾರಿಯೊಬ್ಬರ ವಿರುದ್ಧ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಿಟ್ಟಾದ ಘಟನೆ ನಡೆಯಿತು. ಜಿಲ್ಲೆಯಲ್ಲಿ ಈ ಬಾರಿಯ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಿದ್ದು, ಅರಸೀಕೆರೆ ತಾಲೂಕಿನಲ್ಲಿ 4 ಮೀ. ಹೆಚ್ಚಾಗಿದೆ ಎಂದು ಭೂವಿಜ್ಞಾನ ಅಧಿಕಾರಿ ಸುಧಾ ವರದಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಶಾಸಕರು, ತಾಲೂಕಿನ ಒಂದೆರಡು ಗ್ರಾಮಗಳಲ್ಲಿ ಮಳೆ ಬಿದ್ದಿರುವುದು ಬಿಟ್ಟೆರೆ ತಾಲೂಕಿನಲ್ಲಿ ಎಲ್ಲಿಯೂ ಮಳೆ ಬಿದ್ದಿಲ್ಲ. ಆದರು ಹೇಗೆ ಅಂತರ್ಜಲ ಏರಿದೆ ಎಂದು ಪ್ರಶ್ನಿಸಿದರಲ್ಲದೆ, 10 ವರ್ಷಗಳಿಂದ ತಾಲೂಕು ಬರದಿಂದ ಕಂಗೆಟ್ಟಿದೆ. ಈ ಸ್ಥಿತಿ ಇನ್ನೂ ಮುಂದುವರೆ ದಿದೆ. ಹಲವೆಡೆ ಕುಡಿಯುವ ನೀರಿಗೂ ತೊಂದರೆ ಇದೆ. ನಿಮ್ಮಂಥಹ ಅಧಿಕಾರಿಗ ಳಿಂದಲೇ ಜನತೆಗೆ ಅನ್ಯಾಯವಾಗುತ್ತಿದೆ. ಸುಳ್ಳು ವರದಿಗಳು ನೀಡುವುದರಿಂದಲೇ ಸರ್ಕಾರದಿಂದ ಅನುದಾನ ಕಡಿತಗೊಳ್ಳುತ್ತದೆ. ನೈಜ ಚಿತ್ರಣ ವರದಿ ಮಾಡಿ ಜನರ ಸಂಕಷ್ಟ ನಿವಾರಣೆಗೆ ಸಹಕರಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಾಸಕ ಪ್ರೀತಂ ಜೆ.ಗೌಡ, ಜಿಪಂ ಅಧ್ಯಕ್ಷೆ ಶ್ವೇತಾ ದೇವ ರಾಜ್, ಉಪಾಧ್ಯಕ್ಷ ಸುಪ್ರದೀಪ್ ಯಜ ಮಾನ್, ಜಿಪಂ ಸಿಇಓ ಜಿ.ಜಗದೀಶ್, ತಾಪಂ ಅಧ್ಯಕ್ಷರು ಉಪವಿಭಾಗಾಧಿಕಾರಿ ಗಳು, ವಿವಿಧ ಇಲಾಖಾ ಅಧಿಕಾರಿಗಳಿದ್ದರು.

Translate »