ಬಂಡೀಪುರದಲ್ಲಿ ಪ್ರಾಣಿ-ಪಕ್ಷಿಗಳ ಸದ್ದಿಲ್ಲ…  ಕಂಡಲ್ಲೆಲ್ಲಾ ಬೂದಿ ರಾಶಿ… ರಾಶಿ…
ಚಾಮರಾಜನಗರ

ಬಂಡೀಪುರದಲ್ಲಿ ಪ್ರಾಣಿ-ಪಕ್ಷಿಗಳ ಸದ್ದಿಲ್ಲ… ಕಂಡಲ್ಲೆಲ್ಲಾ ಬೂದಿ ರಾಶಿ… ರಾಶಿ…

February 26, 2019

ಬಂಡೀಪುರ: ಹಸಿರಿನಿಂದ ಸದಾ ಕಂಗೊಳಿಸುತ್ತಿದ್ದ, ಜಿಂಕೆಗಳ ಹಿಂಡು-ಹಿಂಡು ಕಾಣ ಬರುತ್ತಿದ್ದ ಜಗತ್ ಪ್ರಸಿದ್ಧ ಜಾಗದಲ್ಲಿ ಈಗ ನೀರವ ಮೌನ. ದಿನ ನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಫಾರಿಗೆ ತೆರಳುವ ಜಾಗ ಬಿಕೋ….. ಹಕ್ಕಿಗಳ ಚಿಲಿಪಿಲಿ ಸದ್ದಿಲ್ಲ…. ಎಲ್ಲಿ ನೋಡಿದರಲ್ಲಿ ಬೂದಿ ಬೂದಿ…. ಗುಡ್ಡಗಳು ಬೋಳು ಬೋಳು….

ಇವು ಕಂಡು ಬರುತ್ತಿರುವುದು ಬಂಡೀಪುರ ಅರಣ್ಯದಲ್ಲಿ. ಕಳೆದ ನಾಲ್ಕೈದು ದಿನಗಳಿಮದ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗೆ ಬಂಡೀ ಪುರ ಅರಣ್ಯ ಅಕ್ಷರಶಃ ನಲುಗಿದೆ. ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಬಂಡೀಪುರ ಅರಣ್ಯದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಬೂದಿ ಕಂಡು ಬರುತ್ತಿದೆ. ಸಾಲು-ಸಾಲು ಗುಡ್ಡಗಳು ಈಗ ಬರಿ ದಾಗಿದೆ. ಎಲ್ಲಿ ನೋಡಿದರಲ್ಲಿ ಬೋಳು ಆಗಿರು ವುದು ಕಂಡು ಬರುತ್ತಿದ್ದು, ಪರಿಸರ ಮತ್ತು ಪ್ರಾಣಿಪ್ರಿಯರಲ್ಲಿ ಕಣ್ಣೀರು ತರಿಸಿದೆ.

ಬಂಡೀಪುರ ಎಂದರೆ ಮೊದಲು ತಟ್ಟನೆ ನೆನಪಿಗೆ ಬರುವುದು ಜಿಂಕೆಗಳ ಹಿಂಡು-ಹಿಂಡು. ಈಗ ಹಿಂಡು-ಹಿಂಡು ಇರಲಿ, ಒಂದೆ ಒಂದು ಜಿಂಕೆಯೂ ಸಹ ಕಂಡು ಬರುತ್ತಿಲ್ಲ. ಇಡೀ ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವುದ ರಿಂದ ಪ್ರಾಣಿಗಳು ಸುರಕ್ಷಿತ ಸ್ಥಳಕ್ಕೆ ತೆರಳಿವೆ. ರಾಜ್ಯದ ನಾನಾ ಮೂಲಗಳಿಂದ ಬಂಡೀಪುರಕ್ಕೆ ಆಗಮಿಸಿ ಆ ಪ್ರದೇಶದ ಸೌಂದರ್ಯ ಮತ್ತು ಪ್ರಾಣಿಗಳನ್ನು ವೀಕ್ಷಿಸಲು ತೆರಳುತ್ತಿದ್ದ ಪ್ರವಾಸಿಗರ ಸ್ವರ್ಗದಂತೆ ಇದ್ದ ಸಫಾರಿ ಸ್ಥಳದಲ್ಲಿ ಈಗ ನೀರವ ಮೌನ ಆವರಿಸಿದೆ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆಯ ಸಫಾರಿಯನ್ನು ಸದ್ಯದ ಮಟ್ಟಿಗೆ ಒಂದು ವಾರಗಳ ಕಾಲ ಸ್ಥಗಿತ ಮಾಡಲಾಗಿದೆ. ಟಿಕೆಟ್ ವಿತರಿಸುವ ಕೊಠಡಿಯ ನೋಟಿಸ್ ಬೋರ್ಡ್‍ನಲ್ಲಿ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಹೀಗಾಗಿ ವಿಷಯ ತಿಳಿಯದೇ ಆಗಮಿಸುತ್ತಿರುವ ಪ್ರವಾಸಿಗರು ನಿರಾಸೆ ಯಿಂದ ವಾಸಪ್ ಆಗುತ್ತಿದ್ದಾರೆ.

ಬಂಡೀಪುರ ಎಂದ ತಕ್ಷಣ ಅಲ್ಲಿ ಜಿಂಕೆಗಳು, ಹುಲಿಗಳು, ಆನೆಗಳು, ಚಿರತೆಗಳು, ಕಾಡೆಮ್ಮೆಗಳು ಲೆಕ್ಕ ಇಲ್ಲದಷ್ಟು ಇವೆ. ನಾನಾ ರೀತಿಯ ಪಕ್ಷಿಗಳ ಆವಾಸ ಸ್ಥಾನವಾಗಿದೆ ಎನ್ನಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯನ್ನು ನೋಡಿದರೆ ಆ ಮಾತು ಸುಳ್ಳಾಗಲಿದೆ. ಹಕ್ಕಿಗಳ ಚಿಲಿಪಿಸಿ ಸದ್ದಿಲ್ಲದೇ ಇಡೀ ಕಾಡು ಬಣಗುಟುತ್ತಿದೆ. ಬೆಂಕಿಯಿಂದ ತನ್ನನ್ನೂ ತಾನು ರಕ್ಷಿಸಿಕೊಳ್ಳಲು ಪ್ರಾಣಿಗಳು ಸುರಕ್ಷಿತ ಸ್ಥಳಗಳಿಗೆ ಫಲಾಯನ ಮಾಡಿವೆ. ಹೀಗಾಗಿ ಇಡೀ ಕಾಡು ಬಣಗುಡುತ್ತಿದೆ.

ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಬೆಂಕಿ ಉರಿಯುತ್ತಿರುವುದರಿಂದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಲವು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಹಸಿರಿನಿಂದ ಕಂಗೊಳಿಸು ತ್ತಿದ್ದ ಮರ-ಗಿಡಗಳು ಸುಟ್ಟು ಹೋಗಿ ಕಪ್ಪಾಗಿ ಕಾಣುತ್ತಿವೆ. ಕುರುಚಲು ಗಿಡಗಳು, ಹುಲ್ಲು-ಗರಿಕೆ ಬೂದಿ ಆಗಿವೆ. ಬೆಂಕಿ ಬಿದ್ದಿರುವ ಅರಣ್ಯ ಪ್ರದೇಶದಲ್ಲಿ ಬೂದಿ ಬಿಟ್ಟರೆ ಬೇರೇನೂ ಕಂಡು ಬರುತ್ತಿಲ್ಲ. ಹಸಿರಿನಿಂದ ಸದಾ ಕಂಗೊಳಿಸುತ್ತಿದ್ದ ಗುಡ್ಡಗಳು ಬೆಂಕಿಯ ಜ್ವಾಲೆಗೆ ತನ್ನ ತನವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಹೀಗಾಗಿ ಗುಡ್ಡಗಳು ಬೋಳು ಬೋಳಾಗಿ ಕಾಣುತ್ತಿದ್ದು, ಪರಿಸರ ಪ್ರಿಯರಲ್ಲಿ ಕಣ್ಣೀರು ತರಿಸಿದೆ.

Translate »