ಶಿಕ್ಷಕರ ವರ್ಗಾವಣೆಗೆ ಬಂದಿರುವ ಅರ್ಜಿಗಳು ಬರೋಬ್ಬರಿ 60 ಸಾವಿರ!
ಮೈಸೂರು

ಶಿಕ್ಷಕರ ವರ್ಗಾವಣೆಗೆ ಬಂದಿರುವ ಅರ್ಜಿಗಳು ಬರೋಬ್ಬರಿ 60 ಸಾವಿರ!

August 5, 2018

ಮೈಸೂರು: ಶಾಲಾ ಶಿಕ್ಷಕರ ವರ್ಗಾವಣೆ ಕೋರಿ 60 ಸಾವಿರ ಅರ್ಜಿಗಳು ಬಂದಿವೆ. ಈ ಬಾರಿ ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 3 ರಿಂದ 4 ಲಕ್ಷ ಶಿಕ್ಷಕರಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೆ ಮೂರು ವಲಯಗಳಾಗಿ ವಿಂಗಡಿಸಿದ್ದು, ಒಂದೇ ಕಡೆ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಒಮ್ಮೆಲೇ ಎಲ್ಲಾ ಶಿಕ್ಷಕರನ್ನು ವರ್ಗಾವಣೆ ಮಾಡಲು ಆಗುವುದಿಲ್ಲ. ಯಾವುದೇ ಕಾರಣಕ್ಕೂ ಇಲಾಖೆ ಹಸ್ತಕ್ಷೇಪ ಇರುವುದಿಲ್ಲ ಎಂದರು.

ಬಡ್ತಿ ಮೀಸಲಾತಿ: ಎಸ್‍ಸಿ-ಎಸ್‍ಟಿ ನೌಕರರ ಬಡ್ತಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಹಿಂದಿನ ಸರ್ಕಾರದ ಅವಧಿಯಲ್ಲೇ ಅಂಕಿತ ಹಾಕಿದ್ದಾರೆ. ಅದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಿದೆ. ಆದರೆ ಪವಿತ್ರ ಪ್ರಕರಣ ಸುಪ್ರೀಂಕೋರ್ಟ್‍ನ ಮುಂದಿರುವುದರಿಂದ ಜಾರಿಗೆ ವಿಳಂಬವಾಗಿದೆ. ಈ ಕುರಿತು ದಲಿತ ಮುಖಂಡರ ಸಭೆ ನಡೆಸಿ ಎಲ್ಲವನ್ನೂ ವಿವರಿಸಲಾಗಿದೆ ಎಂದು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಆ. 14ರಂದು ಕೋರ್ಟ್‍ನಲ್ಲಿ ವಿಚಾರಣೆ ಇರುವುದರಿಂದ ಅದನ್ನು ನೋಡಿಕೊಂಡು, ರಾಷ್ಟ್ರಪತಿಗಳಿಂದ ಅಂಕಿತ ಹಾಕಿರುವ ವಿಧೇಯಕ ಜಾರಿಗೊಳಿಸಲು ಅನುಮತಿ ಕೋರಲಾಗುವುದು ಎಂದು ಎನ್.ಮಹೇಶ್ ಸ್ಪಷ್ಟಪಡಿಸಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಸರ್ಕಾರಿ ಮುದ್ರಣಾಲಯದಿಂದ ಅಕ್ರಮವಾಗಿ ಕಾಗದ ಸಾಗಾಟ ಮಾಡಲಾಗುತ್ತಿದೆ ಎಂಬ ಕನ್ನಡಪರ ಸಂಘಟನೆಯೊಂದರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Translate »