ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ
ಮೈಸೂರು

ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ

August 5, 2018

ಮೈಸೂರು: ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ ಕೆ.ಆರ್.ವನಂ, ಕೃಷ್ಣಮೂರ್ತಿಪುರಂ ಮತ್ತು ಅಶೋಕಪುರಂನಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಆಹವಾಲು ಸ್ವೀಕರಿಸಿದರು. ಜೊತೆಗೆ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.

ನಗರ ಪಾಲಿಕೆಯ 56ನೇ ವಾರ್ಡ್(ಹಳೆಯ ವಾರ್ಡ್ ಸಂಖ್ಯೆ 7) ವ್ಯಾಪ್ತಿಯ ಬಡಾವಣೆಗಳಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದ ರಾಮದಾಸ್, ಕೃಷ್ಣಮೂರ್ತಿಪುರಂನಲ್ಲಿರುವ ಅರಳೀಮರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಪಾದಯಾತ್ರೆ ವೇಳೆ ಸ್ಥಳೀಯರು ಕೃಷ್ಣಮೂರ್ತಿಪುರಂನಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರರು ವೇಗವಾಗಿ ಚಾಲನೆ ಮಾಡುತ್ತಾರೆ. ಅಲ್ಲದೆ ಸೈಲೆನ್ಸರ್ ಮಾರ್ಪಡಿಸಿ, ಭಾರೀ ಕರ್ಕಶ ಶಬ್ದ ಬರುವಂತೆ ಚಾಲನೆ, ವೀಲ್ಹಿಂಗ್ ಮಾಡುವುದರಿಂದ ಹಿರಿಯ ನಾಗರಿಕರು ಹಾಗೂ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬಡಾವಣೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು. ಶಾಸಕರು, ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳಿಗೆ ರಸ್ತೆಗೆ ಡುಬ್ಬ ಹಾಕುವಂತೆ ಸೂಚಿಸಿದರು.

ಈ ಹಿಂದೆ ಇದ್ದ ‘ನೆರೆ-ಹೊರೆ’ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗಿನ ಪರಿಸರ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಮಳೆ ಬಂದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ ಎಂದು ದೂರಿದರು. ಇದೇ ವೇಳೆ ಶಾಸಕರು, ವಿದ್ಯುತ್ ಪೂರೈಕೆ ನ್ಯೂನತೆ ಸರಿಪಡಿಸುವಂತೆಯೂ, ತಿಂಗಳಿಗೊಮ್ಮೆ ಸಭೆ ನಡೆಸಿ ನೆರೆಹೊರೆ ಸಮಿತಿಯ ಚಟುವಟಿಕೆ ಆರಂಭಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ವನಿತಾ ಸದನ ಶಾಲೆಯಲ್ಲಿ ಶಾಸಕ ರಾಮದಾಸ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದಿಂದ ಬಂದವರು. ಇವರಿಗೆ ಆಟವಾಡಲು ಮೈದಾನದ ವ್ಯವಸ್ಥೆ ಇಲ್ಲ. ಈ ಹಿಂದೆ ಇದ್ದ ಮೈದಾನದಲ್ಲಿ ಆಟವಾಡಲು ಬಿಡದೆ ನಿರ್ಬಂಧಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು. ಇದರಿಂದ ಸ್ಥಳದಲ್ಲಿಯೇ ಪಾಲಿಕೆ ಅಧಿಕಾರಿಗಳಿಗೆ ಶಾಸಕರು ನಾಳೆಯಿಂದಲೇ ಈ ಹಿಂದೆ ಇದ್ದ ಆಟದ ಮೈದಾನದಲ್ಲಿ ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸುವಂತೆ ಆದೇಶಿಸಿದರು.

ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 143 ಜನ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಗಸ್ಟ್ 20ರಂದು ಸುಮಾರು 50 ಮನೆಗಳ ಕಟ್ಟಡ ಕೆಲಸ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್ 10ರಂದು ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಿದ ಅವರು, ಅಶೋಕಪುರಂನಲ್ಲಿ ಫುಟ್‍ಪಾತ್‍ನಲ್ಲಿ ಕುಳಿತು ವ್ಯಾಪಾರ ಮಾಡುವವರ ಅನುಕೂಲಕ್ಕಾಗಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣಕ್ಕೆ ಕಳೆದ 4 ವರ್ಷಗಳಿಂದ ಬೀಗ ಹಾಕಿದ್ದು, ಇದನ್ನು ಸ್ಥಳೀಯರಿಗೆ ಬಾಡಿಗೆಗೆ ಕೊಟ್ಟು, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಪಾದಯಾತ್ರೆಯ ವೇಳೆ ಸಾರ್ವಜನಿಕರಿಂದ ರಸ್ತೆ, ಚರಂಡಿ ದುರಸ್ತಿ, ಮಳೆ ನೀರು ಸರಾಗವಾಗಿ ಹೋಗುವಂತೆ ಕ್ರಮ ಕೈಗೊಳ್ಳುವಂತೆ ಸಾಕಷ್ಟು ದೂರುಗಳು ಕೇಳಿ ಬಂದವು. ಬಹುತೇಕ ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿವರಿಸಿದರು.

Translate »