ಹಾಸನ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಹಾಸನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಎಸ್ಪಿ ನಂದಿನಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ರಸ್ತೆಯನ್ನು ದಾಟುವಾಗ ಎರಡು ದಿಕ್ಕಿನತ್ತ ದೃಷ್ಟಿ ಹರಿಸಿ, ನಂತರ ವಾಹನ ಇಲ್ಲದಿರುವುದು ಖಚಿತವಾದ ಮೇಲೆ ಮುಂದೆ ಹೋಗಬೇಕು. ಪಾದಚಾರಿಗಳು ಫುಟ್‍ಪಾತ್ ಮೇಲೆ ಚಲಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿಗೆ ಕೂರಬಾರದು. ಕಡ್ಡಾಯವಾಗಿ ಹೆಲ್ಮೆಟ್ ಉಪಯೋಗಿಸಬೇಕು. ನಗರ ಮತ್ತು ಪಟ್ಟಣ ಭಾಗಗಳಲ್ಲಿ 30 ಕಿ.ಮೀ.ಗಿಂತ ಹೆಚ್ಚು ವೇಗವಾಗಿ ವಾಹನವನ್ನು ಓಡಿಸಬಾರದು. ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು. ಹೆಚ್ಚು ಶಬ್ದ ಇರುವ ಹಾರನ್ ಬಳಸಬಾರದು. ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡಬಾರದು ಎಂದು ಹೇಳಿದರು.
ಆಟೋ ರಿಕ್ಷಾ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ವಿಮೆ ಇರುವ ವಾಹನವನ್ನು ಮಾತ್ರ ಚಲಾ ಯಿಸಿ, ಆಟೋ ಚಾಲಕರು ಮೀಟರಿಗಿಂತ ಹೆಚ್ಚಿನ ಹಣವನ್ನು ಪಡೆಯಬಾರದು. ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೂ ಪ್ರಯಾ ಣಿಕರಿಂದ ಮೀಟರಿಗಿಂತ ಒಂದೂವರೆ ಪಟ್ಟು ಬಾಡಿಗೆಯನ್ನು ಪಡೆಯಬಹುದು ಎಂದು ಕಿವಿಮಾತು ಹೇಳಿದರು. ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಸಭ್ಯ ರೀತಿ ವರ್ತಿಸಬೇಕು. ಆಟೋ ಚಾಲಕರು ಕಡ್ಡಾಯವಾಗಿ ಖಾಕಿ ಸಮವಸ್ತ್ರ ಧರಿಸಬೇಕು. ಎಲ್ಲೆಲ್ಲಿ ಆಟೋ ನಿಲ್ದಾಣವಿದೆ ಅಲ್ಲಿಯೇ ನಿಲ್ಲಿಸಬೇಕೇ ಹೊರತು ರಸ್ತೆ ಮಧ್ಯೆ ನಿಲ್ಲಿಸಿ ಇತರೆ ವಾಹನ ಸಂಚಾರಕ್ಕೆ ಅಡಚಣೆ ಮಾಡಬಾರದು ಎಂದರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದಲ್ಲಿ ಜಾಗೃತಿ ಮೂಡಿಸುವ ಕರಪತ್ರ ವಿತರಿಸುವ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಆಟೋ ಮಾಲೀಕರು ಮತ್ತು ಚಾಲಕರು ಉಪಸ್ಥಿತರಿದ್ದರು.