ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಚಾಮರಾಜನಗರ

ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

September 24, 2018

ಚಾಮರಾಜನಗರ: ರಸ್ತೆ ವಿಭಜಕಕ್ಕೆ ಆಟೋವೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ.

ರಾಮಸಮುದ್ರ ಬಡಾವಣೆ ನಾಯಕರ ಬೀದಿಯ ನಿವಾಸಿ ಬಂಗಾರನಾಯಕ(38) ಮೃತ ಚಾಲಕನಾಗಿದ್ದು, ರಾಮಸಮುದ್ರದ ಹನುಮಂತನಾಯಕ, ಮೈಸೂರು ವಿಜಯನಗರ ನಿವಾಸಿ ರವಿ, ಶಿವಕುಮಾರ್, ಹರೀಶ, ಮಹೇಂದ್ರ, ರಾಜು ಅವರುಗಳು ಗಾಯ ಗೊಂಡಿದ್ದಾರೆ. ಗಾಯಾಳುಗಳಲ್ಲಿ ಹನುಮಂತನಾಯಕ ಹಾಗೂ ರವಿ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಯಿತು. ಆಟೋ ಚಾಲಕ ಬಂಗಾರನಾಯಕ ತನ್ನ ಆಟೋದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಸೋಮವಾರಪೇಟೆಗೆ ತೆರಳುತ್ತಿದ್ದ. ಈ ವೇಳೆ ಪ್ರವಾಸಿ ಮಂದಿರ ಬಳಿಯಿರುವ ಸಿಎಸ್‍ಐ ಕಾನ್ವೆಂಟ್ ಹತ್ತಿರ ಹೆದ್ದಾರಿಯಲ್ಲಿ ಹಾಕಲಾಗಿದ್ದ ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಆಟೋದಿಂದ ಕೆಳಗೆ ಬಿದ್ದ ಚಾಲಕನ ತಲೆಗೆ ತೀವ್ರ ಗಾಯವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನಗರ ಸಂಚಾರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »