ಹಳ್ಳಿ-ಹಳ್ಳಿಗಳಲ್ಲಿ ಯುವ ಬ್ರಿಗೇಡ್‍ನಿಂದ ಸ್ವಾಮಿ ವಿವೇಕಾನಂದರ ವಿಚಾರಧಾರೆ ಜಾಗೃತಿ
ಚಾಮರಾಜನಗರ

ಹಳ್ಳಿ-ಹಳ್ಳಿಗಳಲ್ಲಿ ಯುವ ಬ್ರಿಗೇಡ್‍ನಿಂದ ಸ್ವಾಮಿ ವಿವೇಕಾನಂದರ ವಿಚಾರಧಾರೆ ಜಾಗೃತಿ

January 11, 2020

ಚಾಮರಾಜನಗರ, ಜ.10(ಎಸ್‍ಎಸ್)- ಯುವ ಬ್ರಿಗೇಡ್ ಸಂಘಟನೆಯು ಗ್ರಾಮ ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಹಂಚುತ್ತಾ ಹಳ್ಳಿಗಳೊಂದಿಗೆ ಬಾಂಧವ್ಯ ಬೆಸೆಯುವ ಪ್ರಯತ್ನಕ್ಕಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ 3 ದಿನಗಳ ಪಾದಯಾತ್ರೆ ಶುಕ್ರವಾರ ಆರಂಭವಾಯಿತು.

ಚಾಮರಾಜನಗರ ತಾಲೂಕಿನ ಅಮಚ ವಾಡಿ ಗ್ರಾಮದಲ್ಲಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಆರಂಭಿಸಲಾ ಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಸಾಗಿತು. ನಂತರ ಚನ್ನಪ್ಪನ ಪುರ ಗ್ರಾಮಕ್ಕೆ ತೆರಳಿತು. ಈ ವೇಳೆ ಗ್ರಾಮದ ಯುವಕ ಮಲ್ಲಿಕಾರ್ಜುನ ಎಂಬಾತ ಎದುರಾದ, ಈತನನ್ನು ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಾಗ್ಮಿಯೂ ಆದ ಚಕ್ರವರ್ತಿ ಸೂಲಿಬೆಲೆ ಅವರು ಎಷ್ಟನೇ ತರಗತಿಯಲ್ಲಿ ಓದುತ್ತಿದ್ದಿಯಾ ಎಂದು ಪ್ರಶ್ನಿಸಿದರು. ಈ ವೇಳೆ ಮಲ್ಲಿಕಾರ್ಜುನ್ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಎದೆ ನೋವು ಇರುವ ಕಾರಣ ಎರಡು ತಿಂಗಳಿಂದ ಕಾಲೇಜಿಗೆ ಹೋಗಿಲ್ಲ ಎಂದ. ಈ ವೇಳೆ ಸೂಲಿಬೆಲೆ ಅವರು, ಬೆಂಗಳೂರಿಗೆ ಬರು ವಂತೆ, ಚಿಕಿತ್ಸೆಗೆ ಸಂಘಟನೆ ವತಿಯಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿ ಫೋನ್‍ನಂಬರ್ ನೀಡಿದರು.

ತದನಂತರ ಪಾದಯಾತ್ರೆಯ ವಿ.ಸಿ. ಹೊಸೂರು ಗ್ರಾಮಕ್ಕೆ ತೆರಳಿತು. ಗ್ರಾಮದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಕೋಡಿಉಗನೆ, ಬೇವಿನತಾಳಪುರ, ಬಸವಾಪುರ, ಅಂಕನಶೆಟ್ಟಿಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಯಿತು. ಇಲ್ಲಿ ಮಧ್ಯಾಹ್ನದ ಊಟ ವಾದ ನಂತರ ವೆಂಕಟಯ್ಯನಛತ್ರ, ಬಂಡಿಗೆರೆ, ಚಿಕ್ಕಮೋಳೆ, ದೊಡ್ಡಮೋಳೆ ಗ್ರಾಮಗಳಲ್ಲಿ ಪಾದಯಾತ್ರೆ ಸಾಗಿತು. ಸಂಜೆ ಹರದನ ಹಳ್ಳಿಯಲ್ಲಿ ಪಾದಯಾತ್ರೆ ಕೊನೆಗೊಂಡಿತು. ನಾಳೆ (ಶನಿವಾರ) ಮತ್ತು ಭಾನುವಾರ ಪಾದಯಾತ್ರೆ ಮುಂದುವರೆಯಲಿದೆ.

ಈ ವೇಳೆ ಮಾತನಾಡಿದ ಪಾದಯಾತ್ರೆಯ ನೇತೃತ್ವ ವಹಿಸಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯುವ ಬ್ರಿಗೇಡ್ ಪಾದಯಾತ್ರೆ ಹಮ್ಮಿಕೊಂಡಿದೆ. ಸುಮಾರು 700 ರಿಂದ 800 ಹಳ್ಳಿಗಳಲ್ಲಿ ಈ ಪಾದಯಾತ್ರೆ ನಡೆಯ ಲಿದ್ದು, ಸ್ವಾಮಿ ವಿವೇಕಾನಂದರ ವಿಚಾರಧಾರೆ ಗಳನ್ನು ತಿಳಿಸಲಾಗುವುದು. ಈ ಮೂಲಕ ಹೊಸ ಭಾರತವನ್ನು ಕಟ್ಟುವ ಪ್ರಯತ್ನ ನಡೆಸಲಾಗುವುದು. ಹಳ್ಳಿಗಳನ್ನು ವ್ಯಸನ ಮುಕ್ತವಾಗಿಸುವ ಪ್ರಯತ್ನ ಮಾಡಲಾಗು ವುದು. ಹೆಂಡದ ಅಂಗಡಿ, ಬೀಡಿ, ಸಿಗರೇಟ್ ಮಾರುವ ಅಂಗಡಿ ಇಲ್ಲದಂತೆ ಗ್ರಾಮಸ್ಥರು ಪಣ ತೊಡುವಂತೆ ಪ್ರಯತ್ನಿಸಲಾಗುವುದು. ವ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ಮೂಲಕ ಎಲ್ಲರೂ ಸೌಹಾರ್ದತೆಯಿಂದ ಬಾಳುವಂತೆ ಪ್ರಯತ್ನಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ವಿಭಾಗದ ಕಾರ್ಯದರ್ಶಿ ರಘು, ಮುಖಂಡ ರಾದ ಸುರೇಶ್ ಎನ್. ಋಗ್ವೇದಿ, ಮೋಹನ್ ರಾಜ್, ಪ್ರದೀಪ್‍ಕುಮಾರ್ ದೀಕ್ಷಿತ್, ಅಜಯ್, ಮಂಜು, ರಾಜು ಹೊಸೂರು, ಶಂಕರ್, ಮಹೇಶ್, ಶಶಿಧರ್ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Translate »