ಹಾಸನ: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಬುಧ ವಾರ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟಿತ್ತಲ್ಲದೆ, ವ್ಯಾಪಾರ ಭರಾಟೆ ಕಂಡು ಬಂತು. ಆಯುಧಪೂಜೆ ಪ್ರಯುಕ್ತ ಬೂದುಗುಂಬಳಕಾಯಿ ಸೈಜಿಗೆ ತಕ್ಕಂತೆ 20 ರೂ.ನಿಂದ 100 ರೂ.ಗವರೆಗೂ ಬೆಲೆ ನಿಗದಿಯಾಗಿತ್ತು. ಸೇಬು ಕೆ.ಜಿ.ಗೆ 100ರಿಂದ 120 ರೂ., ಸೇವಂತಿ ಹೂವು ಮಾರಿಗೆ 50ರಿಂದ 70 ರೂ., ಮಾವಿನ ಸೊಪ್ಪು ಕಟ್ಟಿಗೆ 10 ರೂ., ವರೆಗೆ ಬೆಲೆ ಕಂಡು ಬಂತು. ಇನ್ನು ಮೋಸಂಬಿ, ಕಿತ್ತಲೆ ಹಣ್ಣುಗಳ ಬೆಲೆ ಕೊಂಚ ಕಡಿಮೆ ಇತ್ತು.
ಆಯುಧಪೂಜೆ ಹಿನ್ನೆಲೆ ವಾಹನ, ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸುವುದರಿಂದ ನಗರದೆಲ್ಲೆಡೆ ಭರ್ಜರಿಯಾಗಿ ವಿವಿಧ ಪೂಜಾ ಸಾಮಗ್ರಿಗಳು ಖರೀದಿಯಾಗುತ್ತಿವೆ. ನಗರದ ಪ್ರಮುಖ ವೃತ್ತಗಳಾದ ಕಟ್ಟಿನಕೆರೆ ಮಾರುಕಟ್ಟೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ ಸೇರಿದಂತೆ ಕುವೆಂಪು ನಗರದ ಗಣಪತಿ ದೇವಸ್ಥಾನದ ಬಳಿಯೂ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು. ಎಲ್ಲೆಲ್ಲಿಯೂ ಬೂದುಗುಂಬಳಕಾಯಿ, ಬಾಳೆಕಂದು, ಮಾವಿನ ಸೊಪ್ಪು, ಚೆಂಡು ಹೂವು ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳ ಮಾರಾಟದ ದೃಶ್ಯ ಸಾಮಾನ್ಯವಾಗಿತ್ತು.
ರಾಮನಾಥಪುರ ವರದಿ: ಅತಿವೃಷ್ಠಿಯಿಂದ ತತ್ತರಿಸಿದರೂ ಮಹಾನವಮಿ ಆಯುಧ ಪೂಜೆ ಪ್ರಯುಕ್ತ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಕಂಡು ಬಂತು.ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಇಂದು ಬುಧವಾರ ದುರ್ಗಷ್ಟಮಿ, ತುಲಾಸಂಕ್ರಮಣದ ಅಷ್ಟಮಿ ಪ್ರಯುಕ್ತ ಹಾಗೂ ಮಹಾನವಮಿ ಅಯುಧ ಪೂಜೆ ಮುನ್ನ ದಿನವಾದ ಇಂದು ಬೂದು ಗುಂಬಳಕಾಯಿ,ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದರೂ ಜನರು ಬೆಲೆ ಲೆಕ್ಕಿಸದೆ ಖರೀದಿಸಿದರು. ವರ್ತಕರು ಭರ್ಜರಿಯಾಗಿ ವ್ಯಾಪಾರ ನಡೆಸಿದರು.