ಜಿಲ್ಲೆಯೆಲ್ಲೆಡೆ ತ್ಯಾಗ-ಬಲಿದಾನದ ಬಕ್ರೀದ್ ಆಚರಣೆ
ಚಾಮರಾಜನಗರ

ಜಿಲ್ಲೆಯೆಲ್ಲೆಡೆ ತ್ಯಾಗ-ಬಲಿದಾನದ ಬಕ್ರೀದ್ ಆಚರಣೆ

August 23, 2018

ಹಾಸನ:  ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಅನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಹಾಸನ ನಗರ: ನಗರದಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯದ ಮೂಲಕ ಮುಸ್ಲಿಂ ಬಾಂಧವರು ಸಡಗರ ದಿಂದ ಬಕ್ರೀದ್ ಆಚರಿಸಿದರು. ಹಬ್ಬದ ಅಂಗವಾಗಿ ನಗರದ ಹೊಸಲೈನ್ ರಸ್ತೆ ಬಳಿ ಇರುವ ಈದ್ಗಾ ಮೈದಾನಕ್ಕೆ ಬಿಳಿವಸ್ತ್ರ ಧರಿಸಿ ಬೆಳಿಗ್ಗೆಯೇ ಆಗಮಿಸಿದ ಮುಸ್ಲಿಂ ಬಾಂಧವರು ಹಿರಿಯರು-ಕಿರಿಯರೆನ್ನದೆ, ಸಾಮೂಹಿಕವಾಗಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಹೊಳೆನರಸೀಪುರ ವರದಿ: ಪಟ್ಟಣ ದಲ್ಲೂ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಬಕ್ರೀದ್ ಆಚರಿಸಿದರು. ಅರಕಲಗೂಡು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬಿಳಿ ಧಿರಿಸು ತೊಟ್ಟು ಜಮಾಯಿಸಿದ ಮುಸ್ಲಿಂ ಬಾಂಧವರು, ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೆ ಪಟ್ಟಣ ಸಮೀಪದ ಕಡವಿನ ಹೊಸಳ್ಳಿ ಯಲ್ಲಿರುವ ಈದ್ಗಾ ಮೈದಾನದಲ್ಲ್ಲೂ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಅರಸೀಕೆರೆ ವರದಿ: ನಗರದಲ್ಲೂ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸಿದರು. ಮೆರವಣಿಗೆ ಮೂಲಕ ಈದ್ಗಾ ಮೈದಾ ನಕ್ಕೆ ತೆರಳಿದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ನಗರದ ಹುಳಿಯಾರು ರಸ್ತೆಯಲ್ಲಿರುವ ಜಾಮೀಯ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ಬಿಹೆಚ್ ರಸ್ತೆ ಮೂಲಕ ಶ್ರೀನಿವಾಸ ನಗರದಲ್ಲಿರುವ ಈದ್ಗಾ ಮೈದಾನ ತಲುಪಿತು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಗುರು ಮೌಲಾನಾ ಮುನೀಬ್ ರಜಾ ಅಜಾರಿ ಧರ್ಮ ಸಂದೇಶ ಬೋಧಿಸಿದರು. ಈ ಸಂದರ್ಭ ದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಎನ್.ಎ.ಸೈಯದ್ ಸರ್ದಾರ್, ಉಪಾಧ್ಯಕ್ಷ ಸೈಯದ್ ಇನಾಯತ್, ನಗರಸಭೆ ಅಧ್ಯಕ್ಷ ಶಮೀವುಲ್ಲಾ, ಸದಸ್ಯ ಎಎಸ್‍ಕೆ ಶಫೀ ವುಲ್ಲಾ ಖಾನ್, ಜಮೀಲ್ ಆಹ್ಮದ್, ಯೂನಸ್ ಇನ್ನಿತರರಿದ್ದರು.

Translate »