ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು
ಕೊಡಗು

ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು

September 10, 2018

ಮಡಿಕೇರಿ: ಜಿಲ್ಲೆಯಾದ್ಯಂತ ಮಳೆಯ ಕಾರ್ಮೋಡ ಕರಗಿ ನೇಸರನ ಆಗಮನವಾಗಿದ್ದು, ಸಂಪೂರ್ಣ ಸ್ತಬ್ಧಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಚಿಗುರೊಡೆಯುವ ಲಕ್ಷಣ ಕಂಡು ಬರುತ್ತಿದೆ. ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಸೆ.10ರಿಂದ ಜಾರಿಗೆ ಬರುವಂತೆ ಸಡಿಲಿಸಿದ್ದು, ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದವರಿಗೆ ಇದರಿಂದ ತುಸು ನೆಮ್ಮದಿ ದೊರಕಿದಂತಾಗಿದೆ.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ನಿರ್ಬಂಧದ ಕುರಿತು ವಿಶೇಷ ಸಭೆಯನ್ನು ಸೆ.7ರಂದು ನಡೆಸಲಾಗಿದ್ದು, ಅಧಿಕಾರಿ ಗಳ ಸಲಹೆ-ಸೂಚನೆ ಅನ್ವಯ ಸೆ.9ವರೆಗೆ ಪ್ರವಾಸಿಗರ ಆಗಮನಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ ಹೊರಡಿಸಲಾಗಿದೆ. ಮಾತ್ರವಲ್ಲದೆ ಅಪಾಯ ಕಾರಿ ಪ್ರದೇಶಗಳು, ಬೆಟ್ಟ ಶ್ರೇಣಿಗಳು, ಭೂ ಕುಸಿತ ಪ್ರದೇಶಗಳಿಗೆ ತೆರಳುವುದು ಮತ್ತು ಸ್ಥಳ ವೀಕ್ಷಿಸುವು ದಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಜಿಲ್ಲಾಡಳಿತದ ಸ್ಪಷ್ಟ ಸೂಚನೆಯನ್ನು ಉಲ್ಲಂಘಿಸದಂತೆಯೂ ಆದೇಶದಲ್ಲಿ ವಿವರಿಸಲಾಗಿದೆ.

ನಿರ್ಬಂಧಿತ ಪ್ರದೇಶ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ಅಡೆ-ತಡೆಯಾಗದಂತೆ ಕೆಲವು ಪ್ರದೇಶಗಳಿಗೆ ಪ್ರವಾಸಿಗರಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಅಬ್ಬಿ ಫಾಲ್ಸ್, ಮಾಂದಲ್‍ಪಟ್ಟಿ ಮತ್ತು ತಡಿಯಂಡಮೋಳ್ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ. ಮಾತ್ರವಲ್ಲದೆ ಸೋಮವಾರಪೇಟೆ ರಸ್ತೆಯ ಕಾಂಡನಕೊಲ್ಲಿ, ಮಕ್ಕಂದೂರುವಿನ ಮೇಘತ್ತಾಳು, ಹೆಮ್ಮೆತ್ತಾಳು, ಮಂಗಳೂರು ರಸ್ತೆಯ ಭೂ ಕುಸಿತ ಮತ್ತು ಹೆದ್ದಾರಿ ಧ್ವಂಸಗೊಂಡಿರುವ ಪ್ರದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ಪ್ರವೇಶ ನೀಡದಿರಲು ಸಭೆಯಲ್ಲಿ ತೀರ್ಮಾನಿಸಿರುವ ಬಗ್ಗೆ ತಿಳಿದು ಬಂದಿದೆ.

ಭಾರೀ ಪ್ರವಾಹ, ಭೂ ಕುಸಿತ ಮತ್ತು ರಸ್ತೆ ಸಂಚಾರ ವ್ಯವಸ್ಥೆ ಅಲ್ಲೋಲ-ಕಲ್ಲೋಲವಾಗಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 20ರಿಂದ 31ರವರೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆ ಬಳಿಕ ನಿಷೇಧದ ಆದೇಶವನ್ನು ಸೆ.9ರವರೆಗೆ ಮುಂದುವರಿಸಲಾಗಿತ್ತು. ಮಾತ್ರವಲ್ಲದೆ ಹೋಟೆಲ್‍ಗಳು, ಲಾಡ್ಜ್‍ಗಳು, ಹೋಂ ಸ್ಟೇ, ಎಸ್ಟೇಟ್ ಸ್ಟೇ ಸೇರಿದಂತೆ ರೆಸಾರ್ಟ್‍ಗಳಲ್ಲೂ ಪ್ರವಾಸಿಗರಿಗೆ ರೂಂ ವ್ಯವಸ್ಥೆ ಕಲ್ಪಿಸದಂತೆ ಸೂಚಿಸಲಾಗಿತ್ತು. ಆದೇಶ ಸಹಜವಾಗಿಯೇ ಪ್ರವಾಸೋದ್ಯಮವನ್ನೇ ಆಧಾರವಾಗಿಟ್ಟುಕೊಂಡವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಈ ನಡುವೆ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿ ಸೆ.9ರ ನಂತರ ಪ್ರವಾಸಿಗರ ನಿಷೇಧವನ್ನು ಮುಂದುವರೆಸದಂತೆ ಕೋರಿಕೊಂಡಿತ್ತು.

Translate »