ಮೈಸೂರಿಗೆ ತಟ್ಟಲಿದೆ ಬಂದ್ ಬಿಸಿ
ಮೈಸೂರು

ಮೈಸೂರಿಗೆ ತಟ್ಟಲಿದೆ ಬಂದ್ ಬಿಸಿ

September 10, 2018

ಮೈಸೂರು:  ತೈಲ, ಅಡುಗೆ ಅನಿಲ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಸೋಮವಾರ(ಸೆ.10) ಕರೆ ನೀಡಿರುವ `ಭಾರತ್ ಬಂದ್’ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಮೈಸೂರಿನಲ್ಲಿ ಬಂದ್ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಭಾರತ್ ಬಂದ್ ಯಶಸ್ವಿಗೊಳಿಸಲು ಈಗಾಗಲೇ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದು, ಪಕ್ಷದ ಕಾರ್ಯಕರ್ತರು ವಿವಿಧೆಡೆ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದರೊಂದಿಗೆ ಭಾರತ್ ಬಂದ್‍ಗೆ ಜೆಡಿಎಸ್ ಸೇರಿದಂತೆ ಮಿತ್ರ ಪಕ್ಷಗಳು ಬೆಂಬಲ ನೀಡಿ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಈ ನಡುವೆ ಸಾರಿಗೆ ಸಂಸ್ಥೆಯ ನೌಕರರ ಸಂಘ, ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಬೀದಿ ವ್ಯಾಪಾರಿಗಳ ಸಂಘ, ಪ್ರವಾಸಿ ವಾಹನಗಳ ಮಾಲೀಕರ ಸಂಘ, ವಿವಿಧ ಕಾರ್ಮಿಕರ ಸಂಘಟನೆಗಳು, ವ್ಯಾಪಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಭಾರತ್ ಬಂದ್‍ಗೆ ಬೆಂಬಲ ಸೂಚಿಸಿದ್ದು, ಸೋಮವಾರ ಮೈಸೂರು ಸ್ಥಬ್ದವಾಗುವುದು ಬಹುತೇಕ ಖಚಿತವಾಗಿದೆ.

ಬೆಳಗ್ಗೆ 7ರ ನಂತರ ಬಸ್ ರಸ್ತೆಗಿಳಿಯುವುದು ಅನುಮಾನ: ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣದಿಂದ ನಾಳೆ ಬೆಳಗ್ಗೆ 7 ಗಂಟೆಯ ನಂತರ ಬಸ್ ಸಂಚಾರ ಸ್ಥಗಿತಗೊಳ್ಳುವುದು ಖಚಿತವಾಗಿದೆ. ಭಾನುವಾರ ರಾತ್ರಿ ವಿವಿಧ ಗ್ರಾಮಗಳಲ್ಲಿ ತಂಗುವ ಬಸ್‍ಗಳು ಬೆಳಗ್ಗೆ 7 ಗಂಟೆಯವರೆಗೂ ಮೈಸೂರಿಗೆ ಆಗಮಿಸಲಿವೆ. ಸಾರಿಗೆ ನೌಕರರ ಸಂಘ ಬಂದ್‍ಗೆ ಬೆಂಬಲ ನೀಡಿರುವುದರಿಂದ ಹಾಗೂ ಬಂದ್ ವೇಳೆ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುವ ಸಾಧ್ಯತೆ ಇರುವುದರಿಂದ ತಮ್ಮ ತಲೆದಂಡ(ದಂಡ ಕಟ್ಟುವುದನ್ನು)ವಾಗುವುದನ್ನು ತಪ್ಪಿಸಿಕೊಳ್ಳಲು ಬಸ್ ಚಾಲಕರು ಬಸ್ ಅನ್ನು ಚಾಲನೆ ಮಾಡುವುದಕ್ಕೆ ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಹುದು.

ಖಾಸಗಿ ಬಸ್‍ಗಳ ಸಂಚಾರವೂ ಸ್ಥಗಿತ: ಬಂದ್‍ನಿಂದಾಗಿ ಖಾಸಗಿ ಬಸ್‍ಗಳ ಸಂಚಾರದಲ್ಲಿಯೂ ವ್ಯತ್ಯಯವಾಗಲಿದೆ. ರಾಜಕೀಯ ಪಕ್ಷಗಳು ಬಂದ್‍ಗೆ ಕರೆ ನೀಡಿರುವುದರಿಂದ ಖಾಸಗಿ ಬಸ್‍ಗಳ ಮಾಲೀಕರು ತಮ್ಮ ಬಸ್‍ಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲು ಸಂಚಾರ ಸ್ಥಗಿತಗೊಳಿಸುವುದಕ್ಕೆ ನಿರ್ಧರಿಸಲಿದ್ದಾರೆ. ವಿವಿಧ ಮಾರ್ಗಗಳಲ್ಲಿ ಸಂಚರಿಸಲಿರುವ ಖಾಸಗಿ ಬಸ್‍ಗಳು ಮಾರ್ಗ ಮದ್ಯೆ ಪ್ರತಿಭಟನಾಕಾರರ ಕೆಂಗಣ್ಣಿಗೆ ತುತ್ತಾಗಬಹುದು ಹಾಗೂ ರಾಜಕೀಯ ಮುಖಂಡರನ್ನು ಎದುರು ಹಾಕಿಕೊಳ್ಳಬಾರದೆಂಬ ಲೆಕ್ಕಾಚಾರದಲ್ಲಿ ಬಸ್ ಸಂಚಾರವನ್ನು ಸ್ಥಗಿತ ಮಾಡಲಿದ್ದಾರೆ ಎಂದು ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಚಾಲಕರು ತಿಳಿಸಿದ್ದಾರೆ.

ಆಟೋ ಚಾಲಕರ ಬೆಂಬಲ: ಮೈಸೂರು ನಗರದಲ್ಲಿ ಆಟೋ ರಿಕ್ಷಾ ಚಾಲಕರ ಸಂಘಗಳಿದ್ದು, ಹಲವು ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸುತ್ತಿವೆ. ಕೆಲವು ಆಟೋ ಚಾಲಕರ ಸಂಘ ಬಂದ್‍ಗೆ ನೈತಿಕ ಬೆಂಬಲ ನೀಡಿ ರಸ್ತೆಗಿಳಿಯುವುದಕ್ಕೆ ನಿರ್ಧರಿಸಿವೆ. ಆದರೆ ಎಲ್ಲಾದರೂ ಅಡಚಣೆಯಾದರೆ ಆ ಆಟೋ ರಿಕ್ಷಾಗಳ ಓಡಾಟವು ಸ್ಥಬ್ಧವಾಗಲಿದೆ.

ಪ್ರವಾಸಿ ವಾಹನಗಳ ನಿಲುಗಡೆ: ಜೈ ಭವಾನಿ ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘದ ಖಜಾಂಜಿ ಶ್ರೀನಿವಾಸ್ ಮಾತನಾಡಿ, ಪೆಟ್ರೋಲ್, ಡೀಸಲ್, ತೈಲ ಬೆಲೆ ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಭಾರತ್ ಬಂದ್‍ಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷ ಸಂಜಯ್ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಎಲ್ಲಾ ವಾಹನಗಳ ಚಾಲಕರು ಹಾಗೂ ಮಾಲೀಕರು ಬಂದ್‍ಗೆ ಬೆಂಬಲ ನೀಡುವಂತೆ ನಮ್ಮ ಸಂಘದ ನಿರ್ಧರಿಸಿದೆ. 250ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ನಮ್ಮ ಸಂಘದ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಒಮ್ಮತದಿಂದ ಬೆಂಬಲ ನೀಡುತ್ತಿರುವುದಾಗಿ ಅವರು ಹೇಳಿದರು.

ಬೆಂಬಲ ನೀಡದ ಎಪಿಎಂಸಿ: ಭಾರತ್ ಬಂದ್‍ಗೆ ಎಪಿಎಂಸಿ ಬೆಂಬಲ ನೀಡದೆ ಇರಲು ನಿರ್ಧರಿಸಿದೆ. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಸಿದ್ದೇಗೌಡ ಬಂದ್‍ಗೆ ಎಪಿಎಂಸಿ ಬೆಂಬಲ ನೀಡುವುದಿಲ್ಲ.

ಎಪಿಎಂಸಿಯಲ್ಲಿರುವ ಎಲ್ಲಾ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಬದಿ ಹಾಗೂ ಮಾರುಕಟ್ಟೆಯ ವ್ಯಾಪಾರಿಗಳು: ಮೈಸೂರಿನಲ್ಲಿ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಭಾರತ್ ಬಂದ್‍ಗೆ ಬೆಂಬಲ ನೀಡಲು ಉದ್ದೇಶಿಸಿದ್ದಾರೆ. ಈ ಕುರಿತು ಹಲವು ವ್ಯಾಪಾರಿಗಳು ಮಾತನಾಡಿ, ಭಾರತ್ ಬಂದ್ ನಡೆಯುತ್ತಿದೆ. ಇದರಿಂದ ಜನರು ಬರೆದೆ ಇದ್ದರೂ ನಾವು ವ್ಯಾಪಾರ ಮಾಡುವುದಕ್ಕೆ ಬಂದರೆ ಏನು ಪ್ರಯೋಜನವಾಗುವುದಿಲ್ಲ. ಜನರಿಲ್ಲದೆ ಬಂಡವಾಳ ಹೂಡುವುದು ಸಮಂಜಸವಲ್ಲ. ಈ ಹಿನ್ನೆಲೆಯಲ್ಲಿ ಬಂದ್‍ಗೆ ಬೆಂಬಲ ನೀಡುತ್ತೇವೆ. ಸಂಜೆಯ ನಂತರ ಸಾಧ್ಯವಾದರೆ ವ್ಯಾಪಾರ ಆರಂಭಿಸುತ್ತೇವೆ ಎಂದು ಅವರು ಅಭಿಪ್ರಾಯಪಟ್ಟರು.

ಅಗ್ರಹಾರ ವೃತ್ತದಲ್ಲಿ ಪ್ರಗತಿಪರರ ಪ್ರತಿಭಟನೆ

ಭಾರತ್ ಬಂದ್ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 10ಕ್ಕೆ ಮೈಸೂರಿನ ಅಗ್ರಹಾರದ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗರ್ಗ ಜಾಗೃತ ವೇದಿಕೆ ವತಿಯಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ಪ್ರಗತಿಪರ ಹೋರಾಟಗಾರು, ಚಿಂತಕರೂ ಆಗಿರುವ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಮಹೇಶ್ಚಂದ್ರ ಗುರು, ಪ್ರೊ.ಕಾಳೆಗೌಡ ನಾಗವಾರ, ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ ದೇವನೂರ ಮಹದೇವ್, ಮುಖಂಡರಾದ ಕೆ.ಎಸ್.ಶಿವರಾಂ, ಜಾಕೀರ್ ಹುಸೇನ್, ಡೈರಿ ವೆಂಕಟೇಶ್, ಸಿ.ಟಿ.ಆಚಾರ್ಯ, ವಿನೋದ್ ರಾಜ್, ತ್ಯಾಗರಾಜ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್‍ನಿಂದ ಬೃಹತ್ ಮೆರವಣಿಗೆ

ತೈಲ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಭಾರತ್ ಬಂದ್‍ಗೆ ಕರೆ ನೀಡಿರುವುದರಿಂದ ಮೈಸೂರಿನಲ್ಲಿ ಬಂದ್ ಯಶಸ್ವಿಗೊಳಿಸಲು ಸೋಮ ವಾರ ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬೀದಿಗಿಳಿಯಲಿದ್ದಾರೆ. ಕೆ.ಆರ್.ಕ್ಷೇತ, ಎನ್.ಆರ್.ಕ್ಷೇತ್ರ, ಚಾಮರಾಜ ಕ್ಷೇತ್ರದ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ವಿವಿಧೆಡೆಗಳಿಂದ ಪ್ರತ್ಯೇಕವಾಗಿ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗಕ್ಕೆ ಆಗಮಿಸಲಿದ್ದಾರೆ. ಒಟ್ಟು 14 ಸ್ಥಳದಿಂದ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಂಚೂಣಿಯ ನಾಯಕರುಗಳ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಅರಮನೆಯ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಲು ಮೈಸೂರು ನಗರ ಕಾಂಗ್ರೆಸ್ ನಿರ್ಧರಿಸಿದೆ. ಈ ನಡುವೆ ವಿವಿಧ ತಂಡಗಳನ್ನು ರಚಿಸಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವುದಕ್ಕೆ ವ್ಯವಸ್ಥೆ ಮಾಡಿದೆ.

ಬಿಎಸ್‍ಪಿಯಿಂದ ಪ್ರತಿಭಟನೆ

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಭಾರತ್ ಬಂದ್ ಬೆಂಬಲಿಸಿ ಹಾಗೂ ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸುವುದು ಹಾಗೂ ಗುಜರಾತ್‍ನಲ್ಲಿ ದಲಿತ ಸಮುದಾಯದ ಯುವತಿಯೊಬ್ಬಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‍ಪಿಯ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ-ಕಾಲೇಜಿಗೆ ರಜೆ ಘೋಷಣೆ

ಭಾರತ್ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದಾಗಿ ರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುವುದನ್ನು ತಡೆಗಟ್ಟಲು ಸೆ.10 (ಸೋಮವಾರ)ರಂದು ಮೈಸೂರಿನಲ್ಲಿ ಶಾಲೆಗಳು, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ರುವುದಾಗಿ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳಿಗೆ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇ ಚನೆಗೆ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಪೊಲೀ ಸರಿಂದ ವರದಿ ತರಿಸಿಕೊಂಡು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವು ದನ್ನು ಮನಗಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಮುಂಜಾ ಗ್ರತಾ ಕ್ರಮವಾಗಿ ರಜೆ ಘೋಷಿಸಲಾ ಗಿದೆ ಎಂದು ಅವರು ವಿವರಿಸಿದ್ದಾರೆ.

ಇಂದು ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಲಿವೆ

ಮೈಸೂರು: ತೈಲ ಬೆಲೆ ಹೆಚ್ಚಳ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ದಿನವಾದ ಸೋಮವಾರ ಮೈಸೂರಿನ ಎಲ್ಲಾ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಲಿವೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ತಿಳಿಸಿದ್ದಾರೆ. ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಅವರು, ಬ್ಯಾಂಕ್‍ಗಳು ಕೇಂದ್ರ ಸರ್ಕಾರದ ಸ್ವಾಮ್ಯದ್ದಾಗಿದೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ಎಲ್ಲಾ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಭದ್ರತೆಗಾಗಿ ಪೊಲೀಸರ ಸಹಕಾರ ಕೋರಲಾಗಿದೆ. ಅಲ್ಲದೇ ಯಾರಾದರೂ ಬಲವಂತವಾಗಿ ಬ್ಯಾಂಕ್ ಅನ್ನು ಮುಚ್ಚಿಸಲು ಬಂದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್

ಭಾರತ್ ಬಂದ್ ಹಿನ್ನೆಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳನ್ನು ಬಂದೋಬಸ್ತ್‍ಗೆ ನಿಯೋ ಜಿಸಲಾಗಿದೆ. ಇದರೊಂದಿಗೆ 4 ಕೆಎಸ್‍ಆರ್‍ಪಿ, 6 ಸಿಆರ್‍ಪಿಎಫ್ ತುಕಡಿ ಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ ಒಂದು ಸಾವಿರ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಮೌಂಟೆಡ್ ಪೊಲೀಸರನ್ನು ಬಂದೋ ಬಸ್ತ್‍ಗೆ ಬಳಸಿಕೊಳ್ಳಲಾಗಿದೆ. ನಗರ ಸಾರಿಗೆ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತದೆ. ಬಲವಂತವಾಗಿ ಬಂದ್ ಮಾಡಿಸುವುದು ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ.- ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಮೈಸೂರು ನಗರ ಪೊಲೀಸ್ ಆಯುಕ್ತ

ಹೋಟೆಲ್ ಬಂದ್ ಇಲ್ಲ

ಭಾರತ್ ಬಂದ್‍ಗೆ ಹೋಟೆಲ್ ಮಾಲೀಕರ ಸಂಘವು ಕೇವಲ ನೈತಿಕ ಬೆಂಬಲವನ್ನು ಮಾತ್ರ ನೀಡುತ್ತಿದೆ. ಆದರೆ ಹೋಟೆಲ್ ಬಂದ್ ಮಾಡುವುದಿಲ್ಲ. ಈಗಾಗಲೇ ಕೇರಳಾ ಮತ್ತು ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾದ ಅನಾಹುತದಿಂದ ಪ್ರವಾಸಿಗರು ಬರದೇ ಹೋಟೆಲ್ ಉದ್ಯಮ ನಷ್ಟ ಅನುಭವಿಸಿದೆ. ಮುಂದಿನ ಎರಡು ದಿನದಲ್ಲಿ ಗಣೇಶ ಮತ್ತು ಗೌರಿ ಹಬ್ಬ ಇರುವುದರಿಂದ ಹೋಟೆಲ್‍ಗಳಿಗೆ ಗ್ರಾಹಕರು ಬರುವುದು ಕಡಿಮೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾಳಿನ ಬಂದ್‍ಗೆ ನೈತಿಕ ಬೆಂಬಲವನ್ನು ನೀಡಿ ಹೋಟೆಲ್ ತೆರೆಯುತ್ತೇವೆ. – ಸಿ.ನಾರಾಯಣಗೌಡ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

ಜೆಡಿಎಸ್ ಪ್ರತಿಭಟನೆ

ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲ ನೀಡುವಂತೆ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 9.30ಕ್ಕೆ ಮೈಸೂರಿನ ಮಹಾತ್ಮಗಾಂಧಿ ವೃತ್ತದ ಬಳಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಎ.ಹೆಚ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್, ಎಂಎಲ್‍ಸಿಗಳಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ ನಾಗರಾಜು, ಶಾಸಕರುಗಳಾದ ಅಶ್ವಿನ್ ಕುಮಾರ್, ಕೆ.ಮಹದೇವು ಹಾಗೂ ಜಿಪಂ ಸದಸ್ಯರುಗಳು, ಪಾಲಿಕೆ ಸದಸ್ಯರು ಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »