ದಸರಾ ಗಜಪಡೆ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು
ಮೈಸೂರು

ದಸರಾ ಗಜಪಡೆ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು

September 10, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಯ ಮೇಲೆ ಸಿಸಿ ಕ್ಯಾಮರಾದ ಕಣ್ಗಾವಲು ಇಟ್ಟು, ಅಪರಿಚಿತರು ಆನೆಗಳ ಸಮೀಪ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಆನೆಗಳಿಗೆ ಎಲ್ಲಿಲ್ಲದ ಮಹತ್ವವಿದ್ದು, ಅವುಗಳ ಪಾಲನೆ ಮತ್ತು ಪೋಷಣೆಗೆ ಹೆಚ್ಚಿನ ಗಮನ ನೀಡಿದಂತೆ ಆನೆಗಳ ರಕ್ಷಣೆಗೂ ಅರಣ್ಯ ಇಲಾಖೆ ಆದ್ಯತೆ ನೀಡಿದೆ. ಅರಮನೆಯ ಆವರಣದಲ್ಲಿ ಈಗಾಗಲೇ ಮೊದಲ ತಂಡದಲ್ಲಿ ಆಗಮಿಸಿರುವ ಅರ್ಜುನ ನೇತೃತ್ವದ 6 ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ಅಣಿಗೊಳಿಸಲಾಗುತ್ತಿದ್ದು, ಅವುಗಳ ಭದ್ರತೆಗೆ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಚಿನ್ನದ ಅಂಬಾರಿ ಹೊರುವ ಅರ್ಜುನನ ಮೇಲೆ ಹೆಚ್ಚಿನ ಕಾಳಜಿ ಇಡಲಾಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ ತಯಾರಿಸುವ ಘಟಕದ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ. ಉಳಿದಂತೆ ಇನ್ನಿತರ 5 ಆನೆಗಳ ಚಲನ-ವಲನವನ್ನು ಸಿಸಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ. ಅರಮನೆಗೆ ಆಗಮಿಸುವ ಪ್ರವಾಸಿಗರು ಆನೆಗಳ ಮುಂದೆ ಫೋಟೋ ತೆಗೆಸಿಕೊಳ್ಳುವ ಭರಾಟೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಕಣ್ತಪ್ಪಿಸಿ ಆನೆಗಳ ಬಳಿ ನುಸುಳುವುದನ್ನು ಈ ಸಿಸಿ ಕ್ಯಾಮರಾಗಳು ಸೆರೆ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಗಮನ ಸೆಳೆಯಲಿದೆ. ಅರ್ಜುನ ಆನೆಯ ಬಳಿ 2, ಆಹಾರ ತಯಾರಿಕಾ ಘಟಕದಲ್ಲಿ 1, ಮಾವುತರ ಶೆಡ್ ಬಳಿ 1, ಒಣ ಹುಲ್ಲು ಸಂಗ್ರಹ ಘಟಕದ ಬಳಿ 1 ಹಾಗೂ 5 ಆನೆಗಳನ್ನು ಕಟ್ಟಿಹಾಕಿರುವ ಸ್ಥಳದಲ್ಲಿ 2 ಕ್ಯಾಮರಾ ಸೇರಿದಂತೆ ಒಟ್ಟು 9 ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಎಲ್ಲಾ ಕ್ಯಾಮರಾಗಳು ಸೆರೆ ಹಿಡಿಯುವ ಚಿತ್ರಣವು ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪರದೆಯೊಂದರ ಬಳಿ ಬಿತ್ತರವಾಗಲಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಲು ಅರಣ್ಯ ಇಲಾಖೆ ಕುಮಾರ್ ಎಂಬ ಗಾರ್ಡ್ ಅನ್ನು ನಿಯೋಜಿಸಿದೆ. ಒಟ್ಟಾರೆ ಕಾಡಿನಿಂದ ನಾಡಿಗೆ ಬಂದಿರುವ ದಸರಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ಸಜ್ಜುಗೊಳಿಸುವುದರೊಂದಿಗೆ ಅವುಗಳ ಭದ್ರತೆಗೆ ಸಿಸಿ ಕ್ಯಾಮರಾ ಅಳವಡಿಸುವುದು ಸಾರ್ವಜನಿಕ ವಲಯ ಹಾಗೂ ಪ್ರಾಣಿ ಪ್ರಿಯರಿಂದ ಶ್ಲಾಘನೆ ವ್ಯಕ್ತವಾಗಿದೆ.

Translate »