ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ
ಮೈಸೂರು

ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ

June 12, 2018

ಬೆಂಗಳೂರು: ರಾಜ್ಯದ ಕರಾವಳಿ, ಘಟ್ಟ ಪ್ರದೇಶಗಳಲ್ಲದೆ ಮಲ್ನಾಡ್, ಸೆಮಿ ಮಲ್ನಾಡ್ ಪ್ರದೇಶ ದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗು, ಮಂಗ ಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಳೆಯ ಆರ್ಭಟದಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಪಶ್ಚಿಮ ಘಟ್ಟದ ಸಕಲೇಶಪುರದ 3 ಕಡೆಗಳಲ್ಲಿ ಭೂಕುಸಿತ ವಾಗಿದ್ದು, ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ಹಾಸನದಲ್ಲಿಯೇ ಸ್ಥಗಿತಗೊಳಿಸಿ, ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಹಣವನ್ನು ರೈಲ್ವೆ ಅಧಿಕಾರಿಗಳು ಹಿಂತಿರುಗಿಸಿ ದರು. ನಂತರ ಪ್ರಯಾಣಿಕರು ಬಸ್‍ಗಳ ಮೂಲಕ ತೆರಳಿ ದರು. ಇನ್ನು ಹಾನುಬಾಳು ಹೋಬಳಿ ಕೇಂದ್ರಕ್ಕೆ ರಾಗಿ ಗುಂಡಿ, ಕ್ಯಾತನಹಳ್ಳಿ, ಮಜ್ಜನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಯಾದ ಪರಿಣಾಮ ವಿದ್ಯಾರ್ಥಿಗಳು, ಕಾರ್ಮಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿದು ಕಲ್ಲು ಮಣ್ಣೆಲ್ಲಾ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ವಾಹನಗಳು ಹತ್ತಾರು ಕಿ.ಮೀ. ಸಾಲುಗಟ್ಟಿ ನಿಂತಿದ್ದವು. ಬಳಿಕ ಪೊಲೀಸರು ಕೊಟ್ಟಿಗೆಹಾರದ ಬಳಿ ಧರ್ಮಸ್ಥಳ ಹಾಗೂ ಉಜಿರೆ ರಸ್ತೆ ಮಾರ್ಗವನ್ನು ಬದಲಿಸಿದರು. ಹಾಗೆಯೇ ಮಂಗಳೂರಿಗೆ ಹೋಗುವ ವಾಹನಗಳು ಎಸ್.ಕೆ.ಬಾರ್ಡರ್ ಹಾಗೂ ಕುದುರೆಮುಖ ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳ ಲಾಯಿತು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿರುವ ಕಾರಣ ಹೊರ ನಾಡು ಹಾಗೂ ಕಳಸ ಸಂಪರ್ಕ ಕಡಿತಗೊಂಡಿದ್ದು, ಪ್ರವಾ ಸಿಗರು ಹಾಗೂ ಸ್ಥಳೀಯರು ಆತಂಕದಲ್ಲಿದ್ದಾರೆ. ಚಿಕ್ಕಮಗ ಳೂರು ಸಮೀಪದ ಮೈಲಿಮನೆ ಗ್ರಾಮದ ಬಳಿ ಬೃಹತ್ ಗಾತ್ರದ ಮರ ಉರುಳಿಬಿದ್ದ ಪರಿಣಾಮ 2 ಮನೆಗಳು ನೆಲ ಸಮವಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯ ತಪ್ಪಿದೆ. ಮರಬಿದ್ದ ಕಾರಣ ಆಲ್ದೂರು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ತೊಂದರೆಯಾಗಿದೆ. ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಯಾರೂ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಲೆನಾಡಿನ ಎಲ್ಲ ಸಣ್ಣ ನದಿಗಳು, ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ. ಭದ್ರ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಳೆ ಪೀಡಿತ ಜಿಲ್ಲೆಗಳ ಕೆಲ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣಕನ್ನಡ, ಉಡುಪಿ, ಕಾರವಾರ, ಮಂಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಸುಮಾರು 1400 ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು, ವಿದ್ಯುತ್ ಇಲ್ಲದೆ ತೀವ್ರ ತೊಂದರೆ ಎದುರಿಸುವಂತಾಗಿದೆ. ಕಳೆದ ರಾತ್ರಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇವಾಲಯಕ್ಕೂ ನೀರು ನುಗ್ಗಿದೆ. ಅಧಿಕ ಮಾಸದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿ ರುವ ಅಪಾರ ಸಂಖ್ಯೆಯ ಭಕ್ತಾರು, ದರ್ಶನಕ್ಕೆ ಪರದಾಡುವಂತಾಗಿದೆ. ಪ್ರವಾಹದಿಂದಾಗಿ ಬೆಳಗಾವಿ ನಗರದಲ್ಲಿ ಮುಖ್ಯರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.

Translate »